ಹಾಸನ: ಜೆಡಿಎಸ್ ನವರಿಗೆ ಅಸ್ತಿತ್ವ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ಜತೆಗೆ ಹೊಂದಾಣಿಕೆಗೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೇ ನಿಮ್ಮೆಲ್ಲರ ಅಸ್ತಿತ್ವ ಉಳಿಯುತ್ತದೆ. ಈ ನಿಟ್ಟಿನಲ್ಲಿ ಶ್ರೇಯಸ್ ಪಟೇಲ್ ಗೆಲ್ಲಿಸುವಂತೆ ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಚುನಾವಣೆ ಆಗಿದೆ. ನಮ್ಮ ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಪಣತೊಟ್ಟು ಹೋರಾಟ ಮಾಡುತ್ತಿದ್ದೇವೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿರುವುದರಿಂದ ರಾಜ್ಯದ ಮುಂಚೂಣಿ ನಾಯಕರು ಪ್ರಚಾರಕ್ಕೆ ಬರುವುದರಿಂದ ಬಾರಿ ಅಂತರದಲ್ಲಿ ಗೆಲುವು ನಮ್ಮದಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಸರಳ ಸಜ್ಜನರಾಗಿ ಎಲ್ಲಾ ಜಾತಿ, ಧರ್ಮವನ್ನು ಗೌರವಿಸುವ ವ್ಯಕ್ತಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೇ ಜಿಲ್ಲೆಯ ಎಲ್ಲಾ ಮುಖಂಡರು ಒಟ್ಟಾಗಿ ನಿಮ್ಮ ಋಣವನ್ನು ತೀರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಮಂಜುನಾಥ್ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಕಪ್ಪು ಹಣ ತರುವುದಾಗಿ ಹೇಳಿತ್ತು. ಈಗ ಆ ವಿಷಯ ಕೈಬಿಟ್ಟು ಶ್ರೀರಾಮನ ವಿಗ್ರಹ ಹಿಡಿದು ಮತಯಾಚಿಸುವುದು ಎಷ್ಟು ಸರಿ? ಇಡೀ ದೇಶದ ಜನ ಇವರ ಪೊಳ್ಳು ಮಾತುಗಳಿಗೆ ಉತ್ತರ ನೀಡುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಾರ್ಜ್, ನಾರಾಯಣಗೌಡ, ರವಿಕುಮಾರ್, ಪುಟ್ಟಸ್ವಾಮಿ, ಕೃಷ್ಣಕುಮಾರ್ ಇತರರು ಉಪಸ್ಥಿತರಿದ್ದರು.