ಜಿಲ್ಲೆ

ಕಾಂಗ್ರೆಸ್ ಬೆಂಬಲಿತರು ಮೇಲುಗೈ

ಕೆ.ಆರ್.ಪೇಟೆ: ತಾಲೂಕು ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಸಹಕಾರ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 10 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಕೂಟ ಕೇವಲ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಫೆ.8ರಂದು ಚುನಾವಣೆ ಪ್ರಕ್ರಿಯೆ ನಡೆದಿತ್ತು. ಕೆಲ ಕಾರಣಗಳಿಂದ ಮತ ಎಣಿಕೆಗೆ ನ್ಯಾಯಾಲಯ ತಡೆ ನೀಡಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಸುಮಾರು ಒಂದೂವರೆ ತಿಂಗಳ ಬಳಿಕ ಬುಧವಾರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಯಿತು.

ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಟಿ.ಚಕ್ರಪಾಣಿ 477 ಮತಗಳನ್ನು ಪಡೆದು ಜಯ ಸಾಧಿಸಿದರು. ಹತ್ತಿರದ ಪ್ರತಿಸ್ಪರ್ಧಿ ಎ.ಎನ್.ದೇವರಾಜು(404) ಅವರನ್ನು 73 ಮತಗಳ ಅಂತರಗಳಿಂದ ಮಣಿಸಿದರು.

ಕಾಂಗ್ರೆಸ್ ಬೆಂಬಲಿತರು: 3ನೇ ವೃತ್ತದಿಂದ ಬಂಡಿಹೊಳೆ ನಾಗೇಶ್, 5ನೇ ವೃತ್ತದಿಂದ ಸಿಮೆಂಟ್ ಮಂಜು, 6ನೇ ವೃತ್ತದಿಂದ ಮಾಳಗೂರು ಜಗದೀಶ್ ಅವಿರೋಧ ಆಯ್ಕೆಯಾದರು. 7ನೇ ವೃತ್ತದಿಂದ ಶೀಳನೆರೆ ರಾಮೇಗೌಡ, 8ನೇ ವೃತ್ತದಿಂದ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, 9ನೇ ವೃತ್ತದಿಂದ ಮಂಜುಳಾ ಕೃಷ್ಣೇಗೌಡ, 11ನೇ ವೃತ್ತದಿಂದ ಎ.ಸಿ.ಮೋಹನ್, 12ನೇ ವೃತ್ತದಿಂದ ಅಕ್ಕಿಹೆಬ್ಬಾಳು ರಾಜನಾಯಕ್, 13ನೇ ವೃತ್ತದಿಂದ ಕವಿತಾ ಚಂದ್ರೇಗೌಡ ಚುನಾಯಿತರಾದರು.

ಜೆಡಿಎಸ್-ಬಿಜೆಪಿ ಬೆಂಬಲಿತರು: 1ನೇ ವೃತ್ತದಿಂದ ಸುನೀಲ್, 4ನೇ ವೃತ್ತದಿಂದ ಬಿ.ಎಸ್.ಸುರೇಶ್, 10ನೇ ವೃತ್ತದಿಂದ ಬಿ.ಜಿ.ಧನಂಜಯ, 2ನೇ ವೃತ್ತದಿಂದ ಅಣ್ಣೇಚಾಕನಹಳ್ಳಿ ನಾಗರಾಜು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತಾಪಂ ಇಒ ಕೆ.ಸುಷ್ಮಾ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತ್ ಕುಮಾರ್, ಬ್ಯಾಂಕ್ ಕಾರ್ಯದರ್ಶಿ ರವಿಕುಮಾರ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಅಭಿನಂದಿಸಿದರು.