ಗುಂಡ್ಲುಪೇಟೆ: ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಬಡವರ್ಗದ ಜನರಿಗೆ ಎಲ್ಲವನ್ನೂ ನೀಡಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದ ನೆಹರು ಪಾರ್ಕ್ ಬಳಿ ಕಾಂಗ್ರೆಸ್ ವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಉದ್ಯಮಿಗಳ ಪಕ್ಷವಾಗಿದ್ದು, ಬೆಲೆ ಏರಿಕೆ ಮಾಡುವ ಮೂಲಕ ಶ್ರೀಸಾಮಾನ್ಯರ ಬದುಕನ್ನು ದುಸ್ತರವಾಗಿಸಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿ ಹೋಗಿದ್ದು, ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಇದರಿಂದ ಸಾಮಾನ್ಯ ಜನತೆ ರೋಸಿಹೋಗಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆಯಲ್ಲಿ 200 ಯೂನಿಟ್ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ, ರಾಜ್ಯದ ಎಲ್ಲ ಮನೆಯ ಗೃಹಿಣಿ (ಮನೆಯ ಯಾಜಮಾನಿಗೆ) ಪ್ರತಿ ತಿಂಗಳು ಮನೆ ನಿರ್ವಹಣೆ ಗೆ 2000 ರೂ.ಗಳನ್ನು ಉಚಿತವಾಗಿ ಕೊಡಲಾಗುವುದು ಎಂದು ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ಡಿಕೆಶಿ ಅವರನ್ನು ತಾಲೂಕಿನ ಲಕ್ಕೂರು ಗೇಟ್‌ನಿಂದ ಕಾರ್ಯಕರ್ತರು ನೂರಾರು ಬೈಕ್ ಮೂಲಕ ಕರೆ ತಂದರು. ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಲಾಯಿತು.
ಸಿದ್ದರಾಮಯ್ಯ ಹುಲಿ, ಡಿಕೆಶಿ ಸಿಂಹ ಎಂದ ಸಾಧುಕೋಕಿಲ: ಹಾಸ್ಯನಟ ಸಾಧು ಕೋಕಿಲ ಮಾತನಾಡಿ, ದೀನ ದಲಿತರ ಪರ ಕಾಂಗ್ರೆಸ್ ನಿಂತಿದೆ. ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಹುಲಿಯಾದರೆ, ಡಿಕೆ ಶಿವಕುಮಾರ್ ಅವರು ಸಿಂಹ. ಇವರಿಗಿಂತ ನಾಯಕರು ಬೇಕಾ? ಹಾಗಾಗಿ ನಿಮ್ಮೆಲ್ಲರ ಸಹಕಾರ ಕಾಂಗ್ರೆಸ್ ಪಕ್ಷದ ಮೇಲಿರಲಿ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮಾಜಿ ಸಂಸದ ಎ.ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡ ಪ್ರಸಾದ್, ಗಣೇಶ್ ಪ್ರಸಾದ್ ಇತರರಿದ್ದರು.