ಚಾಮರಾಜನಗರ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮುಂದಾಗಬೇಕಿದೆ ಎಂದು ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಎಸ್.ಸಿ.ಬಸವರಾಜು ತಿಳಿಸಿದರು.
ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ನಗರಘಟಕ, ಪಂಚಾಯಿತಿ ಬೂತ್, ಸಾಮಾಜಿಕಜಾಲತಾಣ, ಅಸಂಘಟಿತಕಾರ್ಮಿಕ, ಮಹಿಳಾಘಟಕ, ಯುವಘಟಕ, ಬ್ಲಾಕ್ ಕಾಂಗ್ರೆಸ್ ಘಟಕಗಳನ್ನು ರಚನೆಮಾಡಲಾಗಿದೆ. ಪಕ್ಷದಲ್ಲಿ ಸಕ್ರಿಯವಾಗಿ ಕೆಲಸಮಾಡುವವರು, ಪಕ್ಷ ಬಿಟ್ಟು ಹೋಗಿರುವವರ ಜಾಗದಲ್ಲಿ ಹೊಸಬರ ನೇಮಕಾತಿ ಮಾಡಬೇಕಿದೆ ಎಂದರು.
ಕಳೆದಲೋಕಸಭೆ ಚುನಾವಣೆ ನಂತರದ ದಿನಗಳಲ್ಲಿ ಘಟಕಗಳಿಂದ ನಡೆದಿರುವ ಪಕ್ಷದ ಸಂಘಟನೆ ಕುರಿತು ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪದಾಧಿಕಾರಿಗಳು ಪಟ್ಟಿಮಾಡಿ, ಶೀಘ್ರದಲ್ಲಿ ಜಿಲ್ಲಾವೀಕ್ಷಕರಿಗೆ ಸಲ್ಲಿಸಬೇಕು ಎಂದು ಸಲಹೆನೀಡಿದರು.
ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಬಲವರ್ಧನೆಗಾಗಿ ಜಿಲ್ಲೆಯಲ್ಲಿರುವ ಪಕ್ಷದ ಮುಂಚೂಣಿಘಟಕಗಳು ಶ್ರಮಿಸುತ್ತಿವೆ. ಎರಡುದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಎಐಸಿಸಿ ಉಸ್ತುವಾರಿ ಸುರ್ಜೇವಾಲಾ ಆಗಮಿಸಿದ್ದು, ಅವರು ಪಕ್ಷದ ಸಂಘಟನೆ ಕುರಿತು ಮಾಹಿತಿ ಕೇಳಿದ್ದಾರೆ ಎಂದರು.
ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಮಿಲಿಂದ್ ಧರ್ಮಸೇನಾ, ಜಿಲ್ಲಾಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಆರ್.ಮಹದೇವ, ಚಿಕ್ಕಮಹದೇವು, ಕೆಪಿಸಿಸಿ ಸದಸ್ಯ ಸೈಯದ್‌ರಫಿ, ಜಿಲ್ಲಾ ಕಾಂಗ್ರೆಸ್ ಮಹಿಳೆ ಅಧ್ಯಕ್ಷೆ ಲತಾಜತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ತೋಟೇಶ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ,ಚಂದ್ರು, ತಾಲೂಕುಅಧ್ಯಕ್ಷ ನಲ್ಲೂರುಸೋಮೇಶ್ವರ್ ಹಾಗೂ ಇತರರು ಹಾಜರಿದ್ದರು.