ದಾವಣಗೆರೆ: ಮೂರೂವರೆ ತಿಂಗಳು ಪೂರೈಸಿದ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಕುಸಿದಿದೆ. ಆರನೇ ಗ್ಯಾರಂಟಿಯಾಗಿ ರಾಜ್ಯವನ್ನು ಕತ್ತಲಲ್ಲಿಡಲು ಹೊರಟಿದೆ ಎಂದು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವರು ವರ್ಗಾವಣೆ ದಂಧೆಗಿಳಿದಿದ್ದು, ಸರ್ಕಾರದ ಕೆಲಸಗಳನ್ನು ನಿಲ್ಲಿಸಿ ಪರ್ಸೆಂಟೇಜ್ ಕೇಳುತ್ತಿದ್ದಾರೆ. 75 ವರ್ಷದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದಾಗಿದೆ ಎಂದು ದೂರಿದರು.
ಮಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದಾಗ ವಿದ್ಯುತ್ ಉತ್ಪಾದನೆ ಮಾಡಬಹುದಿತ್ತು. ರಾಜ್ಯಕ್ಕೆ 14-15 ಸಾವಿರ ಮೆಗಾವಾಟ್ ಬೇಡಿಕೆ ಇದ್ದು, 31 ಸಾವಿರ ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದಷ್ಟು ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದರೂ ಅಸಮರ್ಪಕ ನಿರ್ವಹಣೆ ಆಗುತ್ತಿದೆ.
ಕಲ್ಲಿದ್ದಲ್ಲನ್ನು ಸಕಾಲಕ್ಕೆ ಸಂಗ್ರಹಿಸಲಿಲ್ಲ. ಖಾಸಗಿಯವರಿಂದಲೂ ವಿದ್ಯುತ್ ಖರೀದಿಸುತ್ತಿಲ್ಲ. ಕೃಷಿ ಚಟುವಟಿಕೆಗೆ 7 ತಾಸು ಕರೆಂಟ್ ನೀಡುತ್ತಿಲ್ಲ. ಅನಿಯಮಿತ ಲೋಡ್‌ಶೆಡ್ಡಿಂಗ್ ಹೇರಲಾಗುತ್ತಿದೆ. ಚುನಾವಣೆ ವೇಳೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರೂ ಗೃಹ ಹಾಗೂ ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಿಸಲಾಗಿದೆ.
ಸರ್ಕಾರ ಕನಿಷ್ಠಪಕ್ಷ ಬರ ಘೋಷಣೆ ಮಾಡಿ ಜನರ ಗುಳೆ ತಪ್ಪಿಸಬಹುದಿತ್ತು. ಗೋಶಾಲೆಗಳನ್ನು, ಜಾನುವಾರುಗಳಿಗೆ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿಲ್ಲ. ಈ ವಿಚಾರದತ್ತ ಗಮನ ಹರಿಸದೆ ಜಾತಿ-ಧರ್ಮಗಳ ನಡುವೆ ಹುಳಿ ಹಿಂಡುವ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ. ಕಾಂಗ್ರೆಸ್ ವೈಫಲ್ಯಗಳ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಲಿಂಗಾಯತರನ್ನು ತುಳಿದಿಲ್ಲ ಯಡಿಯೂರಪ್ಪನವರಿಗೆ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಯುವಕರಿಗೆ ಅವಕಾಶ ಮಾಡಿಕೊಡಲೆಂದು ಅವರು ಸಂತೋಷದಿಂದಲೇ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದಾರೆ ಎಂದರು.
ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ರಾಜಶೇಖರಮೂರ್ತಿ ಅವರಿಗೆ ಮೋಸ ಮಾಡಿದ ಕಾಂಗ್ರೆಸ್, ಲಿಂಗಾಯತರನ್ನು ನಿರಂತರವಾಗಿ ತುಳಿಯುತ್ತಲೇ ಬಂದಿದೆ. ಲಿಂಗಾಯತರನ್ನು ಎರಡನೇ ದರ್ಜೆ ನಾಗರಿಕರಂತೆ ಕಂಡಿದೆ. ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ಅನ್ನು 20 ವರ್ಷ ಕಾಲ ಸಲುಹಿದ ಶಾಮನೂರು ಶಿವಶಂಕರಪ್ಪನವರಿಗೆ ಯಾವ ಸ್ಥಾನಮಾನ ಸಿಕ್ಕಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.
ಹಿಂದು ಧರ್ಮ ಜಾತ್ಯತೀತವಾಗಿದೆ. ಐದು ಸಾವಿರ ವರ್ಷದಷ್ಟು ಹಳೆಯ ವಿದೇಶದಿಂದ ಬಂದ ಶೇ.20ರಷ್ಟು ಅನ್ಯ ಧರ್ಮೀಯರನ್ನು ಸಹಿಸಿ, ಸೋದರರಂತೆ ಕಾಣುತ್ತ ಬಂದಿದ್ದೇವೆ. ಸನಾತನ ಧರ್ಮದ ಬಗ್ಗೆ ಉದಯನಿಧಿ ನೀಡುವ ಹೇಳಿಕೆ ಅರ್ಥವಿಲ್ಲದ್ದು ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸ್ಥಾನ ಆಯ್ಕೆ ಬಿಜೆಪಿ ಆಂತರಿಕ ವಿಚಾರ. ಪಕ್ಷ ತೊರೆದ ನಂತರದಲ್ಲಿ ಜಗದೀಶ್‌ಶೆಟ್ಟರ್ ಮಾತನಾಡಬಾರದು ಎಂದ ಅವರು, ಶಿವಾನಂದ ಪಾಟೀಲ ಅವರು ಕೂಡ ರೈತರು. ಹಾಗಿದ್ದೂ ಅವರು ರೈತರ ವಿರುದ್ಧ ಬಾಯಿತಪ್ಪಿ ಮಾತನಾಡಿರಬೇಕು ಎಂದು ಭಾವಿಸುತ್ತೇನೆ. ಅವರು ಅನ್ನದಾತರ ಬಗ್ಗೆ ಹಾಗೆ ಹೇಳಬಾರದಿತ್ತು ಎಂದರು.
ದೀಪ ಹಚ್ಚುವರಿಲ್ಲದ ಸ್ಥಿತಿ ಬರಲಿದೆ
ರಾಜ್ಯದಲ್ಲಿ ಕಾಂಗ್ರೆಸ್ ಅವಸಾನದಲ್ಲಿದೆ. ಲೋಕಸಭೆ ಚುನಾವಣೆ ಬಳಿಕ ಅವರ ಪಕ್ಷದಲ್ಲಿ ದೀಪ ಹಚ್ಚುವವರಿಲ್ಲದ ಸ್ಥಿತಿ ಬರಲಿದೆ ಎಂದ ಅವರು, ಲೋಕಸಭೆ ಚುನಾವಣೆ ಇನ್ನೂ ದೂರವಿದೆ. ರಾಜ್ಯದ 25 ಸಂಸದರೂ ಸ್ಪರ್ಧೆಗೆ ಸಮರ್ಥರಿದ್ದಾರೆ. ಆರೋಗ್ಯ ಸಮಸ್ಯೆ ಇದ್ದಲ್ಲಿ ಬೇರೆಯವರು ಅಭ್ಯರ್ಥಿಗಳಾಗಬಹುದು ಎಂದರು.
ಇಂಡಿಯಾ ಹೆಸರು ಭಾರತವಾಗಿ ಮಾರ್ಪಾಡಾಗಲು 15 ಸಾವಿರ ಕೋಟಿ ರೂ. ಬೇಕಾಗಲಿದೆ ಎಂಬುದು ಕಾಂಗ್ರೆಸ್‌ನ ಊಹಾತ್ಮಹ ಸೃಷ್ಟಿ. ಅಷ್ಟೊಂದು ವೆಚ್ಚ ಬೇಕಿಲ್ಲ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ.ರಾಮಚಂದ್ರ, ಬಸವರಾಜನಾಯ್ಕ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ ಇತರರಿದ್ದರು.