ಜಿಲ್ಲೆ

ಕಾಂಗ್ರೆಸ್ ನಾಯಕರಿಲ್ಲದ ತಬ್ಬಲಿ

ಬಾಗಲಕೋಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವದ ನಾಯಕ. ಅವರ ಮುಂದೆ ರಾಹುಲ್ ಗಾಂಧಿ ಸಮಾ ಆಗಲು ಸಾಧ್ಯನಾ..? ಕಾಂಗ್ರೆಸ್ ಸೋತು ಸೋತು ವಿಸರ್ಜನೆ ಹಂತಕ್ಕೆ ಬಂದಿದೆ. ಇದೇ ಸ್ಥಿತಿ ಬಂದ್ರೆ ಭಾರತ ಕಾಂಗ್ರೆಸ್ ಮುಕ್ತ ಆಗಲಿದೆ. ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ನಾಯಕರು ಯಾರಿದ್ದಾರೆ…? ನೀವು ತಬ್ಬಲಿ ಆಗಿದ್ದೀರಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಗುಡುಗಿದ ಪರಿಯಿದು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ಮಂಗಳವಾರ ಸಂಜೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಮೋದಿಗೆ ಸರಿಸಾಟಿಯಾಗುವದಿಲ್ಲ. ಮೂರು ರಾಜ್ಯಗಳ ಚುನಾವಣೆಯಲ್ಲಿ ದೂಳಿಪಟ ಆದರು ಬುದ್ದಿ ಕಲಿಯಲಿಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ನನಗೆ ೮೧ ವರ್ಷಕ್ಕೆ ಕಾಲಿಟ್ಟಿದ್ದೇನೆ.ದೇವರು ಆರೋಗ್ಯ ಕೊಟ್ಟರೆ. ಈ ಸಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ. ನಾನು ಚುನಾವಣೆ ಸ್ವರ್ಧೆ ಮಾಡಲ್ಲ ಎಂದಿರುವುದು ನನ್ನ ನಿರ್ಧಾರ. ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಯಾರು ನನಗೆ ರಾಜೀನಾಮೆ ಕೊಡಲು ಹೇಳಿಲ್ಲ. ಜಿಲ್ಲೆಯ ಎಲ್ಲ ಕ್ಷೇತ್ರ ಗೆಲ್ಲಬೇಕು ಎಂದರು.
ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕಿದೆ. ರಾಜ್ಯದಲ್ಲಿ ಮತ್ತೆ ಲೋಕಸಭೆಯಲ್ಲಿ ೨೫ ಸ್ಥಾನ ಗೆಲ್ಲಬೇಕು. ಅದಕ್ಕಾಗಿ ನಾನು ಪ್ರಯತ್ನ ಮಾಡುತ್ತಿದ್ದೇನೆ. ೬೦ ವರ್ಷ ಆಳಿದ ಕಾಂಗ್ರೆಸ್ ಮಾಡಿದ ಸಾಧನೆ ಏನು.?. ಭಾಗ್ಯ ಲಕ್ಷ ಯೋಜನೆ ನಾನು ತಂದೆ. ೨೫ ಲಕ್ಷ ಹೆಣ್ಣು ಮಕ್ಕಳಿಗೆ ಲಾಭ ಆಗಿದೆ. ರೈತರ ಪಂಪಸೆಟ್‌ಗೆ ಉಚಿತ ವಿದ್ಯುತ್ ನೀಡಿದೆ. ರೈತರು ಸ್ವಾಭಿಮಾನ, ಗೌರವದಿಂದ ಬದುಕಬೇಕು ಎನ್ನುವುದು ನನ್ನ ಇಚ್ಛೆ. ಪಿಎಂ ಕಿಸಾನ್ ಮೂಲಕ ರೈತರಿಗೆ ಹತ್ತು ಸಾವಿರ ಕೊಡುತ್ತಿದ್ದೇವೆ. ನೇಕಾರ ಬಂಧುಗಳಿಗೆ ನಾನು, ಬಸವರಾಜ ಬೊಮ್ಮಾಯಿ ಸೌಲತ್ತು ಕೊಟ್ಟಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ೧ ಸಾವಿರ ಕೊಡುವ ತೀರ್ಮಾನ ನಮ್ಮ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ ೫ ಸಾವಿರ ಕೋಟಿ, ಮಹದಾಯಿಗೆ ೧ ಸಾವಿರ ಕೋಟಿ, ಕೃಷ್ಣಾಗೆ ರಾಜ್ಯ ಸರ್ಕಾರ ೫ ಸಾವಿರ ಕೋಟಿ ರೂ. ಇಟ್ಟಿದ್ದೇವೆ, ವೀರಶೈವ ಲಿಂಗಾಯತ್ ನಿಗಮ ಸ್ಥಾಪಿಸಿ ೫೦೦ ಕೋಟಿ ರೂ. ನೀಡಿದ್ದೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಹರವಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುತದೊಂದಿಗೆ ಅಽಕಾರಕ್ಕೆ ಬರಲಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ವಿ.ಪ ಸದಸ್ಯ ಹನುಮಂತ ನಿರಾಣಿ, ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಅಶೋಕ ಲಿಂಬಾವಳಿ, ರಾಜು ನಾಯ್ಕರ, ರಾಜು ಮುದೆನೂರ ಸೇರಿದಂತೆ ಇತರರು ಇದ್ದರು.

ಬಾಕ್ಸ್..
ಚರಂತಿಮಠ ಆದರ್ಶ ಶಾಸಕ

ವೇದಿಕೆ ಮೇಲೆ ಇದ್ದ ಸಚಿವರಾದ ಬೈರತಿ ಬಸವರಾಜ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಶಾಸಕ ವೀರಣ್ಣ ಚರಂತಿಮಠ ಕಾರ್ಯವೈಖರಿ ಹಾಡಿ ಹೊಗಳಿದರು. ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಒಬ್ಬ ಆದರ್ಶ ಶಾಸಕ ಹೇಗೆ ಇರಬೇಕು ಅಂದ್ರೆ ಚರಂತಿಮಠರಂತೆ ಇರಬೇಕು. ಅವರ ಚುನಾವಣೆಗೆ ನಿಂತಾಗ ಎದುರಾಳಿ ಠೇವಣಿ ಕಳೆದುಕೊಳ್ಳಬೇಕು. ಮೇ ಮೊದಲವಾರದಲ್ಲಿ ಚುನಾವಣೆ ನಡೆಯಲಿದ್ದು, ಚರಂತಿಮಠ ಅವರನ್ನ ಬೆಂಬಲಿಸುವಂತೆ ಜನರಿಗೆ ಮನವಿ ಮಾಡುವ ಮೂಲಕ ಬಿಜೆಪಿಯಲ್ಲಿನ ಟಿಕೆಟ್ ಗೊಂದಲಕ್ಕೆ ತೆರೆ ಎಳೆದರು.

ಸ್ವಪಕ್ಷ ವಿರೋಧಿಗಳ ವಿರುದ್ಧ ಶಾಸಕ ಚರಂತಿಮಠ ಗುಟುರು..
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆ ಮತಕ್ಷೇತ್ರದಲ್ಲಿ ೪ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ಆಗಿದೆ. ಭಗವತಿ, ಶಿರೂರ ಏತ ನೀರಾವರಿ, ನವನಗರದ ಮೂರನೇ ಯೂನಿಟ್ ನಿರ್ಮಾಣಕ್ಕೆ ೨೮೦೦ ಕೋಟಿ ರೂ. ಸೇರಿದಂತೆ ಕ್ಷೇತ್ರಕ್ಕೆ ೫೫೦೦ ಕೋಟಿ ರೂ. ಅನುದಾನ ಹರಿದು ಬಂದಿದೆ. ಇದಕ್ಕೆ ಬಿಎಸ್‌ವೈ, ಬಸವರಾಜ ಬೊಮ್ಮಾಯಿ ಕಾರಣ. ನವನಗರ ಯುನಿಟ್-೨ ಉದ್ಘಾಟನೆ ಆಗಬೇಕಿದೆ. ಬಿವಿವಿ ಸಂಘದ ಇಂಜನಿಯರಿಂಗ್ ಕಾಲೇಜ್ ೬೦ ನೇ ವರ್ಷಾಚರಣೆ ಇದೆ. ಈ ಎರಡು ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿ ಬಾಗಲಕೋಟೆಗೆ ಕರೆ ತರಬೇಕು ಎಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ ಅವರು, ಬಾಗಲಕೋಟೆ ನಗರದಲ್ಲಿ ಕೆಲ ಮೆಂಟಲ್ ಗಿರಾಕಿ ಇವೆ. ಆ ಮೆಂಟಲ್‌ಗಳನ್ನು ಪಕ್ಷದಿಂದ ಹೊರ ಹಾಕಿದರು ತಾವು ಪಕ್ಷದ ಮುಖಂಡರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇಂತವರ ಬಗ್ಗೆ ಪಕ್ಷದ ಮುಖಂಡರು ಗಮನ ಹರಿಸಬೇಕು. ಹದ್ದು ಬಸ್ತಿನಲ್ಲಿ ಇಡಬೇಕು. ಇವತ್ತು ವೀರಣ್ಣ ಚರಂತಿಮಠ ಟಿಕೆಟ್ ಅಂತ ಹೇಳಿದ್ರೆ ರಾತ್ರಿ ಮತ್ತಷ್ಟು ಜಾಸ್ತಿ ಹೊಡೆದು ಮಲಗುತ್ತವೆ ಅಂತ ತಮ್ಮ ಸಹೋದರ, ಸ್ವಪಕ್ಷದ ವಿರೋಧಿಗಳ ಹೆಸರು ಹೇಳದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.