ಜಿಲ್ಲೆ

ಕಾಂಗ್ರೆಸ್‌ ನಾಯಕರಿಗೆ ಚೆಂಡು ಹೂವು ಚಂದ ಕಾಣ್ತದೆ, ಇನ್ನಷ್ಟು ಪೋಸ್ಟರ್‌ ಮಾಡಿಸಿ -ಸಿ.ಟಿ.ರವಿ ಲೇವಡಿ

ಜಯವಾಣಿ ಸುದ್ದಿಜಾಲ ಕಾರವಾರ
ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿರುವ ಸರ್ವವ್ಯಾಪಿ  ಬಜೆಟ್‌ನಿಂದ ಕಾಂಗ್ರೆಸ್‌ನವರು ನಿಶಸ್ತ್ರಿಗಳಾಗಿ, ಕಿವಿ ಮೇಲೆ ಚೆಂಡು ಹೂವು ಇಟ್ಟುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ರಾಜ್ಯ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಎಲ್ಲ ವರ್ಗಕ್ಕೂ ಕೊಡುಗೆ ನೀಡಲಾಗಿದೆ. ಕಾಂಗ್ರೆಸ್‌ನವರು ಬಿಡಬೇಕು ಎಂಬ ಶಸ್ತ್ರಗಳನ್ನು ಬಿಜೆಪಿ ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಂಡಿದೆ. ಜನರ ಕಿವಿ ಮೇಲೆ ಚೆಂಡು ಹೂವು ಇಡಬೇಕು ಎಂದು ಕಾಂಗ್ರೆಸ್‌ನವರು ಯೋಜಿಸಿದ್ದರು. ಆದರೆ, ಅವರೇ ಕಿವಿಯ ಮೇಲೆ ಹೂವು ಮುಡಿಯಬೇಕಾದ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡಿದೆ. ಕಿವಿ ಮೇಲೆ ಚೆಂಡು ಹೂವು ಕಾಂಗ್ರೆಸ್‌ನವರಿಗೆ ಇನ್ನು ಶಾಶ್ವತವಾಗಲಿದೆ. ಮತ್ತು ಅವರಿಗೆ ಅದು ತುಂಬಾ ಚಂದ ಕಾಣುತ್ತದೆ. ಜನ ಇಂಥ ವಿಷಯಗಳನ್ನು ನೋಡಿ ಖುಷಿಪಡುತ್ತಾರೆ. ಡಿಕೆಶಿ, ಸಿದ್ದರಾಮಯ್ಯ ಕಿವಿಯ ಮೇಲೆ ಚೆಂಡು ಹೂವಿಟ್ಟುಕೊಂಡ ಇನ್ನೂ ದೊಡ್ಡ ಫೋಸ್ಟರ್‌ಗಳನ್ನು ಎಲ್ಲೆಡೆ ಪ್ರಕಟ ಮಾಡಿ ಎಂದು ಕಾಂಗ್ರೆಸ್‌ಗೆ ಸಲಹೆ ಕೊಡುತ್ತೇನೆ ಎಂದರು.
ಲವ್ ಜಿಹಾದ್ ವ್ಯಾಖ್ಯಾನ:
ಗೃಹ ಸಚಿವ ಆಗರ ಜ್ಞಾನೇಂದ್ರ ಯಾವ ಅರ್ಥದಲ್ಲಿ ಲವ್ ಜಿಹಾದ್‌ಗೆ ನಿರ್ದಿಷ್ಟ ವ್ಯಾಖ್ಯಾನ ಇಲ್ಲ ಎಂದು ಹೇಳಿದರೋ ಗೊತ್ತಿಲ್ಲ. ನಾನು ಅವರಿಗೆ ಹೇಳಿಕೊಡುತ್ತೇನೆ ಎಂದ ಸಿಟಿ ರವಿ ಲವ್ ಜಿಹಾದ್ ವ್ಯಾಖ್ಯಾನ ಹೇಳಿದರು.
ಹಿಂದು ಹೆಣ್ಣು ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಕು ಎಂಬ ದುರುದ್ದೇಶ ಇಟ್ಟುಕೊಂಡು ತಮ್ಮ ಸಂಖ್ಯಾ ಬಾಹುಳ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ಕೆಲಸ ಮಾಡುವುದನ್ನು ಲವ್‌ಜಿಹಾದ್ ಎನ್ನಲಾಗುತ್ತದೆ. ಇಸ್ಲಾಂನಲ್ಲಿ ಕಾಫೀರರು ಅಥವಾ ಅವರ ನಂಬಿಕೆಯನ್ನು ನಂಬದೇ ಇರುವವ ಮೇಲಿನ ಯುದ್ಧವನ್ನು `ಜಿಹಾದ್'ಎಂದು ಕರೆಯುತ್ತಾರೆ. ವಿಶ್ವದಲ್ಲಿ ಬಾಂಬ್ ಹಾಕಬಲ್ಲ ಜಿಹಾದ್ ಇದೆ. ಇಕನಾಮಿಜ್ ಜಿಹಾದ್ ಇದೆ. ಲವ್ ಜಿಹಾದ್ ಕೂಡ ಇದೆ. ಮೋಸದಿಂದ ಪ್ರೀತಿಯ ಕಪಟ ನಾಟಕವಾಡಿ ಮತಾಂತರವನ್ನೇ ಗುರಿಯಾಗಿಟ್ಟುಕೊಳ್ಳುವುದು ಲವ್ ಜಿಹಾದ್ ಆಗಿದೆ. ಅವರ ಹೆಣ್ಣು ಮಕ್ಕಳ ಕಣ್ಣೂ ಹೊರಗೆ ಕಾಣಬಾರದು ಎನ್ನುವ ಇಸ್ಲಾಂ ಮತೀಯರು. ಉಳಿದವರ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಸಿಎಂ ಯಾರು ಎಂಬ ಗೊಂದಲದ ಬಗ್ಗೆ  ಉತ್ತರಿಸಿದ ಸಿ.ಟಿ.ರವಿ, `ತಮ್ಮ  ಮನೆಯ ಜಗಳ ಮುನ್ನೆಲೆಗೆ ಬಂದಾಗ ಇನ್ನೊಬ್ಬರ ವಿಷಯ ಎತ್ತಿ ತಮ್ಮ  ಹುಳುಕನ್ನು ಮರೆಮಾಚುವ ಯತ್ನವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳು ಮಾಡುತ್ತಿವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಾವು ಚುನಾವಣೆಗೆ ಹೋಗುತ್ತೇವೆ. ಅದನ್ನು ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರೂ ಸ್ಪಷ್ಟಪಡಿಸಿದ್ದಾರೆ ಎಂದರು.
ಗುಲಾಮಗಿರಿ ಮನಸ್ಥಿತಿ:
ನಾಯಕತ್ವ ಎನ್ನುವುದು ಡಿಎನ್‌ಎ ಮೂಲಕ ಬರುತ್ತದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಅಪ್ಪನಿಂದ ಮಗ, ಮಗಳಿಗೆ ಬರುವುದು ನಾಯಕತ್ವವಲ್ಲ. ರಾಜೀವ ಗಾಂಧಿ, ಸೋನಿಯಾ ಗಾಂಧಿ ಅವರ ಮಗ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಾಗಿದ್ದಾರೆ. ಇಂದಿರಾ ಗಾಂಧಿ ಅವರಂತೆ ಕೆನ್ನೆ ಮೇಲೆ ಗುಳಿ ಬೀಳುತ್ತದೆ ಎಂಬ ಕಾರಣಕ್ಕೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ನಾಯಕಿ ಎನ್ನುತ್ತಾರೆ. ಆದರೆ, ಅದನ್ನು ನಾಯಕತ್ವ ಎನ್ನಲು ಸಾಧ್ಯವಿಲ್ಲ. ಕೌಟುಂಬಿಕ ವಾರಸುದಾರಿಕೆ ಎನ್ನಬಹುದು. ರೀತಿಯ ಸಂಗತಿಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಮಾನಸಿಕ ಗುಲಾಮಗಿರಿಯ, ಜೀತ ಪದ್ಧತಿಯ ಮಾನಸಿಕತೆಯಲ್ಲಿರುವ ಕಾಂಗ್ರೆಸ್‌ನ ಸುರ್ಜೆವಾಲರಂಥ ನಾಯಕರಿಗೆ ನಿಜವಾದ ನಾಯಕತ್ವದ ಅರ್ಥ ಗೊತ್ತಿಲ್ಲ. ಹಾಗಾಗಿ ಅವರು ಬಿಜೆಪಿಯಲ್ಲಿ ನಾಯಕರಿಲ್ಲ ಎನ್ನುತ್ತಿದ್ದಾರೆ. ಚಳುವಳಿಯಿಂದ, ಸೇವೆಯ ಮೂಲಕ ಜನರ ನಡುವೆ ಎದ್ದು ಬರುವುದು ನಿಜವಾದ ಜನ ನಾಯಕತ್ವ. ಆ ಥರದ ನಾಯಕರು ಬಿಜೆಪಿಯಲ್ಲಿ ಊರೂರಿನಲ್ಲೂ ಇದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.


ಶಿವಾಜಿ ಥೀಂ ಪಾರ್ಕ್ ನಿರ್ಮಾಣ:
ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಕಾರವಾರ ಸದಾಶಿವಗಡದಲ್ಲಿ ಶಿವಾಜಿ ಅವರ ಪ್ರತಿಮೆ ಹಾಗೂ ಥೀಂ ಪಾರ್ಕ್ ನಿರ್ಮಾಣಕ್ಕೆ ೩ ಕೋಟಿ ರೂ. ನೀಡಿದ್ದೆ. ಆದರೆ, ತಾಂತ್ರಿಕ ಕಾರಣಗಳಿಂದ ಅದರ ನಿರ್ಮಾಣ ಸಾಧ್ಯವಾಗಿಲ್ಲ. ಈಗಲೂ ಯೋಜನೆ ಕೈಬಿಟ್ಟಿಲ್ಲ. ಸಮಸ್ಯೆ ಬಗೆಹರಿಸಿ ಪಾರ್ಕ್ ನಿರ್ಮಾಣ ಮಾಡಲು ಮನವಿ ಮಾಡುತ್ತೇನೆ ಎಂದು ಸಿ.ಟಿ.ರವಿ ತಿಳಿಸಿದರು.