ಜಿಲ್ಲೆ

ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಸರ್ಕಾರ

ಆರ್.ಕೃಷ್ಣ

ಮೈಸೂರು: ಬಿಜೆಪಿಯನ್ನು ಡಬ್ಬಲ್ ಇಂಜಿನ್ ಸರ್ಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ಈಗ ಡಬ್ಬಲ್ ಸ್ಟೇರಿಂಗ್ ಸರ್ಕಾರವಾಗಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಟೀಕಿಸಿದರು.
ಸರ್ಕಾರ ರಚನೆಗೂ ಮುನ್ನವೇ ಒಬ್ಬರು ಬಲಕ್ಕೆ ಮತ್ತೊಬ್ಬರು ಎಡಕ್ಕೇ ಎಳೆಯುತ್ತಿದ್ದಾರೆ. ಆರಂಭದಲ್ಲಿಯೇ ಕಾಂಗ್ರೆಸ್ ನೀಡಿರುವ ಭರವಸೆ ಉಲ್ಟಾ ಆಗುತ್ತಿದೆ. ಈ ಸರ್ಕಾರ ಎಲ್ಲಿ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ ಎಂದರು.
ಇನ್ನು ಆರು ತಿಂಗಳು ಎಲ್ಲರೂ ತಡೆದುಕೊಂಡು ಇರಿ. ಒಳ್ಳೆಯ ಕೆಲಸ ಮಾಡಿದರೆ ಬೆನ್ನು ತಟ್ಟೋಣ. ಅವರ ಭಾಗ್ಯಗಳು ಯಾವ ರೀತಿ ಜನರಿಗೆ ತಲುಪುತ್ತವೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ವರುಣ ಕ್ಷೇತ್ರವನ್ನು ವರ್ಣರಂಜಿತವಾಗಿ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ. ಅದ್ಯಾವ ರೀತಿ ಮಾಡುತ್ತಾರೆ ಎಂದು ಕಾದುನೋಡೋಣ ಎಂದರು.
ನಾನು ವಿಧಾನ ಪರಿಷತ್ ಸದಸ್ಯ ಸಹಿತವಾಗಿ ಮತ್ಯಾವುದಕ್ಕೂ ಆಸೆಪಟ್ಟವನಲ್ಲ, ಆಸೆ ಪಡುವುದೂ ಇಲ್ಲ. ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ನನಗೆ ಎರಡು ಕಣ್ಣುಗಳು ಇದ್ದ ಹಾಗೆ. 2019ರ ದಸರಾವನ್ನು ಚೆನ್ನಾಗಿ ಮಾಡಲು ನನ್ನ ಅಳಿಲು ಸೇವೆ ಇದೆ. ಕರೊನಾ ಕಾಲದಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ನೋಡಿ ನಮ್ಮ ವರಿಷ್ಠರು ವರುಣಕ್ಕೆ ಹೋಗಲು ಸೂಚಿಸಿದರು ಎಂದು ಸ್ಪಷ್ಟಪಡಿಸಿದರು.