ಹಾಸನ : ಈ ಹಿಂದೆ ರಾಹುಲ್‌ಗಾಂಧಿ ಸುಗ್ರೀವಾಜ್ಞೆ ಹರಿದು ಹಾಕಿದರ ಪರಿಣಾಮ ಇಂದು ಅದರ ಫಲವನ್ನು ಅನುಭವಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸೇರ್ಪಡೆಗೊಂಡ ನಂತರ ಬುಧವಾರ ಮೊದಲ ಬಾರಿಗೆ ಜಿಲ್ಲಾ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನಪ್ರತಿನಿಧಿಗಳ ಕಾಯ್ದೆಗೆ ಸುಗ್ರೀವಾಜ್ಞೆ ತಂದಿದ್ದರು. ಆದರೆ ಅದರ ಪ್ರತಿಯನ್ನು ಹರಿದು ಹಾಕಿದ್ದರು. ಆದರೆ ಈಗ ಅವರ ಬುಡಕ್ಕೆ ಬಂದ ಮೇಲೆ ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳದೆ ಹೋರಾಟ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಏಕೆ ಜಾರಿಗೆ ತಂದರು? ಆ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್, ದೇವೇಗೌಡರು, ರಾಮಕೃಷ್ಣ ಹೆಗ್ಗಡೆ, ವಾಜಪೇಯಿ, ಎಲ್.ಕೆ.ಅಡ್ವಾಣಿಯಂತಹ ನಾಯಕರು ಜೈಲಿಗೆ ಹೋಗಿದ್ದರು. ಆಗ ಪ್ರಜಾಪಭುತ್ವ ಸಮಾಧಿಯಾಗಿರಲಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯ ಮಾಡುತ್ತಿದ್ದರು. ಈಗ ಜಾರಿಯಾದ ಮೇಲೆ ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಆದರೆ ಇದುವರೆಗೂ ವಿರೋಧ ಪಕ್ಷದವರ ನಿಲುವು ಏನು ಎಂಬುದನ್ನು ಬಹಿರಂಗಪಡಿಸಬೇಕು. ಧರ್ಮ ಧರ್ಮಗಳನ್ನು ಎತ್ತಿಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ರಾಜಕೀಯ ಪಿತೂರಿ ಮಾಡುತ್ತಿರುವುದು ಸರಿಯಲ್ಲ ಎಂದರು.
ನಾನು ಬಿಜೆಪಿ ಪಕ್ಷಕ್ಕೆ ಯಾವುದೇ ಅಪೇಕ್ಷೆ, ಷರತ್ತು, ಆಕಾಂಕ್ಷೆ ಇಲ್ಲದೆ ಪ್ರೀತಿ, ಗೌರವದಿಂದ ಸೇರ್ಪಡೆಯಾಗಿದ್ದೇನೆ. ಬಿಜೆಪಿ ಪಕ್ಷದ ನಾಯಕತ್ವ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಮೋದಿಯವರ ನಾಯಕತ್ವ ಮೆಚ್ಚಿ ಕಳೆದ ಶನಿವಾರ ದೆಹಲಿಯಲ್ಲಿ ಪಕ್ಷ ಸೇರ್ಪಡೆಯಾಗಿದ್ದೇನೆ. ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧನಿರುತ್ತೇನೆ ಎಂದರು.
ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ಕೆಲಸ ಮಾಡುವೆ. ನಾನೆಂದೂ ಕೂಡ ಗುಂಪು ಕಟ್ಟಿಕೊಂಡು ಲಾಬಿ ಮಾಡುವುದಿಲ್ಲ. ಜೈಕಾರ ಹಾಕಿಸಿಕೊಳ್ಳುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕಿ ಇಲ್ಲ, ಪಕ್ಷದ ವರಿಷ್ಠರು ಯಾವ ಜವಾಬ್ದಾರಿಯನ್ನು ನೀಡಿದರೂ ಕೂಡ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಹೇಳುವುದು ರೈತರ ಹೆಸರು ಮಾಡುವುದು ಅನಾಚಾರ :
ನಮ್ಮದು ರೈತರ ಪಕ್ಷ, ರೈತರಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳುವರು ನಿಜವಾದ ದೇವರಾದ ರೈತರಿಗೆ ಹಕ್ಕುಪತ್ರ ಕೊಡಲು ತಹಸೀಲ್ದಾರ್ ಅವರನ್ನು ತಡೆದರು. ಹೇಳುವುದು ರೈತರ ಹೆಸರು, ಮಾಡುವುದು ಮಾತ್ರ ಅನಾಚಾರ, ಮನೆ ಬೃಂದಾವನ ಎಂಬ ನಾಟಕವಾಡುತ್ತಾರೆ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಎಟಿಆರ್ ವಾಗ್ದಾಳಿ ನಡೆಸಿದರು.
ದೇವರ ಬಳಿ ರೈತನಿಗೆ ಮತ್ತು ನಾಡಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವವರು ನಿಜವಾದ ರೈತರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಿಕೆಯ ಸಭೆಯಲ್ಲಿ ಹಕ್ಕುಪತ್ರ ನೀಡಲು ತಕರಾರು ತೆಗೆದು ನಿಜವಾದ ರೈತರಿಗೆ ಅನ್ಯಾಯ ಮಾಡುವ ಮೂಲಕ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಎಚ್‌ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಸಾಲ ಕೊಟ್ಟು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಹೊರಹಾಕಲಾಯಿತು. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲು ಮುಂದಾದಾಗ ರೇವಣ್ಣ ತಡೆದರು. ಆದರೂ ಮಾತನಾಡಿದೆ. ಸತ್ಯವೇ ನಮ್ಮ ತಾಯಿ -ತಂದೆ ಎಂದು ನಂಬಿರುವವನು ನಾನು. ಅಧಿಕಾರ ಇರಲಿ, ಇಲ್ಲದೇ ಇರಲಿ, ಇದ್ದುದನ್ನು ಇದ್ದ ಹಾಗೆ ಹೇಳುವೆ. ಅದಕ್ಕಾಗಿ ನನ್ನನ್ನು ಹೊರ ಹಾಕಲು ಗುಂಪುಗಾರಿಕೆ ಮಾಡಿಕೊಂಡು ತಮ್ಮ ಸಂಬಂಧಿಕರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಹುನ್ನಾರ ಮಾಡಿದ್ದರು ಎಂದು ಆರೋಪಿಸಿದರು.
ಟಿಕೆಟ್ ಕಿತ್ತಾಟ ಜನರ ಹಿತಕ್ಕಾಗಿ ಅಲ್ಲ :
ಹಾಸನದಲ್ಲಿ ಏನು ನಡೆಯುತ್ತಿದೆ ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇಡೀ ಜಿಲ್ಲೆಯನ್ನು ಇಡೀ ಕುಟುಂಬದ ಆಸ್ತಿ ಮಾಡಿಕೊಳ್ಳಲು ಹೊರಟಿದ್ದಾರೆ. ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹೊರಟಿರುವ ಇವರು ಯಾರಿಗೋಸ್ಕರ ಟಿಕೆಟ್‌ಗೆ ಕಿತ್ತಾಡುತ್ತಿದ್ದಾರೆ. ಅವರು ತಮ್ಮ ಕುಟುಂಬದವರಿಗಾಗಿಯೇ ಹೊರತು ಜನರಿಗಲ್ಲ ಎಂದು ಎಟಿಆರ್ ಲೇವಡಿ ಮಾಡಿದರು.
ಒಂದು ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದವರು ಇಡೀ ರಾಜ್ಯದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರಾ? ಹಾಸನದಲ್ಲಿ ಗೊಂದಲ ಉಂಟು ಮಾಡುತ್ತಿರುವವರು ಯಾರು? ಎಲ್ಲವೂ ಜನರಿಗೆ ಗೊತ್ತಿದೆ. ಆದರೆ ಬಿಜೆಪಿ ಪಕ್ಷ ಸ್ವಂತಕ್ಕಾಗಿ ಈ ರೀತಿ ನಡೆದುಕೊಳ್ಳುವುದಿಲ್ಲ. ನಿಸ್ವಾರ್ಥ ಸೇವೆ ಮಾಡುವವರನ್ನು ಗುರುತಿಸುತ್ತಿದೆ. ಇವರದ್ದು ಕುಟುಂಬದ ಹಿತಕ್ಕಾಗಿ ಮಾತ್ರ ಕಿತ್ತಾಟ ನಡೆಯುತ್ತಿದೆ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಮುಖಂಡರಾದ ನವಿಲೆ ಅಣ್ಣಪ್ಪ, ಬೆಣ್ಣೂರು ರೇಣುಕುಮಾರ್, ಪರ್ವತಯ್ಯ, ಚಂದ್ರು ಹಾಜರಿದ್ದರು.