ಜಿಲ್ಲೆ

ಕಾಂಗ್ರೆಸ್ ಗ್ಯಾರಂಟಿಗಳಿಗೆ ತನ್ನ ವಿರೋಧ ಇರುವುದಾಗಿ ಬಿಜೆಪಿ ಬಹಿರಂಗವಾಗಿ ಹೇಳಲಿ: ದಿನೇಶ್ ಅಮೀನ್‌ಮಟ್ಟು

ಮೈಸೂರು: ತಾಕತ್ತಿದ್ದರೆ ಕಾಂಗ್ರೆಸ್ ಗ್ಯಾರಂಟಿಗಳಿಗೆ ತನ್ನ ವಿರೋಧ ಇರುವುದಾಗಿ ಹೇಳಿಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸುವಂತೆ ಬಿಜೆಪಿಗೆ ಸವಾಲು ಹಾಕಬೇಕೆಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ದಿ ಇಂಡಿಯನ್ ಪೊಲಿಟಿಕಲ್ ಲೆಜೆಂಡ್ ಸಿದ್ದರಾಮಯ್ಯ 76ರ ಸಂಭ್ರಮ, ಕಾಂಗ್ರೆಸ್ ಗ್ಯಾರಂಟಿ ಜನೋತ್ಸವದ ಅವಲೋಕನ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಇವತ್ತು ಗ್ಯಾರಂಟಿಗಳ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದೆ. ಉಚಿತವೆಂದು ಬಿಜೆಪಿ ಗೇಲಿ, ಟೀಕೆ ಮಾಡುತ್ತಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೂ ಉಚಿತ ಅಲ್ಲ. ಅದು ಸಂವಿಧಾನಬದ್ಧ ಕೊಡುಗೆ. ದೇಶದಲ್ಲಿ ಉಚಿತವಾಗಿ 119 ಯೋಜನೆಗಳನ್ನು ಕೊಡಲಾಗುತ್ತಿದೆ ಎಂದು ಹೇಳಿದರು.
3.27 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 5 ಗ್ಯಾರಂಟಿಗಳ ಅನುಷ್ಠಾನಕ್ಕೆ 35 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಇದರಿಂದ ಯಾವ ಅಭಿವೃದ್ಧಿ ಯೋಜನೆಗಳೂ ಕುಂಠಿತವಾಗುವುದಿಲ್ಲ. ರಾಜಕಾರಣಿಗಳಿಗೆ ಕಮಿಷನ್ ಸಿಗುವುದಿಲ್ಲ. ನೇರವಾಗಿ ಜನರ ಖಾತೆಗೆ ಹೋಗುತ್ತದೆ. ಬೇರೆ ರಾಜ್ಯಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಿರುವ ಉದಾಹರಣೆಯಿದೆ. ಖಜಾನೆ ಖಾಲಿಯಾಗುತ್ತದೆ ಎನ್ನುವುದು ಸುಳ್ಳು ಪ್ರಚಾರ ಎಂದರು.
ಮೈಸೂರಿನಲ್ಲಿ ನಕಲಿ ಸಿಂಹದಂತಹ ದೊಡ್ಡ ಗ್ಯಾಂಗ್ ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಬಗ್ಗೆ ಗೇಲಿ ಮಾಡುವ ಕೆಲಸ ಮಾಡುತ್ತಿದೆ. ನಿಜವಾಗಿ ಇವರಿಗೆ ತಾಕತ್ತು ಇದ್ದರೆ ಮುಂದಿನ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯ ವಿರೋಧವಿರುವುದಾಗಿ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಏಕೆ ಚಕಾರ ಎತ್ತುತ್ತಿಲ್ಲ?: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಟ್ಟಿ ಭಾಗ್ಯಗಳಿಂದ ಖಜಾನೆ ಖಾಲಿ ಎಂದು ಟೀಕಿಸಿದ್ದಾರೆ. ಹಾಗಾದರೆ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್, ಅರ್ಧ ಲೀ. ಹಾಲು ಉಚಿತವಾಗಿ ವಿತರಣೆ ಮಾಡಲಾಗುವುದೆಂದು ಹೇಳಿತ್ತು. ಉತ್ತರಪ್ರದೇಶದಲ್ಲಿ ಸ್ಕೂಟಿ ವಿತರಣೆ ಮಾಡುತ್ತಿರುವುದು, ಕೇಂದ್ರ ಸರ್ಕಾರದ 12 ಯೋಜನೆಗಳು ಉಚಿತ ವ್ಯಾಪ್ತಿಗೆ ಬಂದಿರುವುದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಜನರಿಗೆ ಕತ್ತಿ, ತಲವಾರ್, ತ್ರಿಶೂಲ ಹಂಚುವುದಕ್ಕೆ, ಮಹಿಳೆಯರು, ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೆ ಈ ದುಷ್ಕೃತ್ಯಗಳನ್ನು ಒಂದು ಪಕ್ಷ ಬೆಂಬಲಿಸುತ್ತದೆ. ಅವರು ಮಾತ್ರ ಗ್ಯಾರಂಟಿ ಯೋಜನೆ ವಿರೋಧಿಸುತ್ತಾರೆ. ಹೀಗೆ ಎರಡು ನಾಲಿಗೆಗಳಲ್ಲಿ ಮಾತಾಡುವುದು ಆತ್ಮವಂಚಕ ನಡವಳಿಕೆ ಎಂದು ಟೀಕಿಸಿದರು.
ಪರಿಶಿಷ್ಟರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ವಿರೋಧಿಸುವ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ 45 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಶೇ. 24 ಮೀಸಲಿಟ್ಟು ಮಾತಾಡಲಿ. ಹಾಗೆಯೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಜಾರಿಗೆ ತರುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಅವರು ಒಂದು ರಾಜಕೀಯ ಪಕ್ಷವನ್ನು ಮೀರಿ ಬೆಳೆದಿದ್ದಾರೆ. ಭಾರತೀಯ ರಾಜಕೀಯದ ದಂತಕತೆಯಾಗಿದ್ದಾರೆ. ಮುಂದೆ 25 ವರ್ಷಗಳ ನಂತರ ಹೀಗೆ ಒಬ್ಬ ಮನುಷ್ಯ ಇದ್ದನಾ ಎಂಬುದಾಗಿ ಹಾಗೂ ಅವರ ಸೈದ್ಧಾಂತಿಕ ಬದ್ಧತೆ ಬಗ್ಗೆ ಮುಂದಿನ ಜನಾಂಗ ಯೋಚನೆ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಲ್ಲಿ ಸ್ವಾವಲಂಬನೆ ಬಂದಿದೆ. ಪ್ರತಿ ಕುಟುಂಬಕ್ಕೆ ಯೋಜನೆ ಕೊಟ್ಟಿದ್ದು, ಜನರ ವಿಶ್ವಾಸ ಗಳಿಸಿದೆ. ಇದನ್ನು ಸಹಿಸದೆ ಬಿಜೆಪಿ ಹಾಗೂ ಜೆಡಿಎಸ್‌ನವರು ಡಿಮಾಂಡ್, ಪೆನ್‌ಡ್ರೈವ್ ಎಂದು ಅಪಪ್ರಚಾರದ ಸುಳ್ಳಿನ ಸರಮಾಲೆಯ ಹೊದಿಕೆಯನ್ನು ಹೊದಿಸುತ್ತಿದ್ದಾರೆ ಎಂದು ಟೀಕಿಸಿದರು.
ಅಧಿಕಾರದಲ್ಲಿ ಇದ್ದಾಗ ಜನರ ಪರ ಕೆಲಸ ಮಾಡಿದೆವು. ವಿರೋಧ ಪಕ್ಷದಲ್ಲಿದ್ದಾಗ ಜನಪರ ಹೋರಾಟ ನಡೆಸಿದವು. ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸ್ವಜನಪಕ್ಷಪಾತದಿಂದ ಬೇಸತ್ತ ಜನರು ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿ. 4 ದಶಕಗಳಿಂದ ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಅವರು ಏನು ಎಂಬುದನ್ನು ತಿಳಿಯಲು ಮಂಡಿಸಿರುವ ಬಜೆಟ್ ನೋಡಿದರೆ ತಿಳಿಯುತ್ತದೆ. ಧರ್ಮ, ಜಾತಿ, ಮತಕ್ಕೋಸ್ಕರ ಕೆಲಸ ಮಾಡದೆ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧರಾಗಿದ್ದಾರೆ. ಹೀಗಾಗಿ ಎರಡನೇ ಅವಧಿಗೆ ಉನ್ನತ ಸ್ಥಾನ ದಕ್ಕಿದೆ ಎಂದು ಹೇಳಿದರು.
ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಲತಾ ಸಿದ್ದಶೆಟ್ಟಿ, ಕೆ.ಮರೀಗೌಡ, ಮಾಜಿ ಮೇಯರ್ ಪುಷ್ಪಲತಾ, ಟಿ.ಬಿ.ಚಿಕ್ಕಣ್ಣ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜುಂಕುವಾರ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಮುಖಂಡರಾದ ಎನ್.ಭಾಸ್ಕರ್, ಎಸ್.ಶಿವನಾಗಪ್ಪ, ಲೇಖಾ ವೆಂಕಟೇಶ್, ತಲಕಾಡು ಮಂಜುನಾಥನ್, ಭಾಸ್ಕರ್ ಎಲ್.ಗೌಡ, ಹುಣಸೂರು ಬಸವಣ್ಣ, ನಾಗೇಶ್, ಕೆ.ಮಹೇಶ್ ಇತರರು ಇದ್ದರು.