ಜಿಲ್ಲೆ

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಆರ್.ಕೃಷ್ಣ

ಮೈಸೂರು: ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ನೀಡಿದ್ದ ಭರವಸೆ ಈಡೇರಿಸದ ಬಿಜೆಪಿ ನಾಯಕರಿಗೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2014ರ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು, ವಾರ್ಷಿಕ 2 ಕೋಟಿ ಉದ್ಯೋಗ ನೀಡಲಾಗುವುದೆಂದು ಘೋಷಣೆ ಮಾಡಿದ್ದರು. ಆದರೆ 9 ವರ್ಷ ಕಳೆದರೂ ಯಾವುದೇ ಯೋಜನೆಯನ್ನೂ ಜಾರಿಗೊಳಿಸಿಲ್ಲ ಎಂದು ದೂರಿದರು.

ತಮ್ಮ ಪಕ್ಷದ ಘೋಷಣೆ, ಭರವಸೆಗಳನ್ನೇ ಇನ್ನೂ ಜಾರಿಗೊಳಿಸಲು ಸಾಧ್ಯವಿಲ್ಲದ ಬಿಜೆಪಿ ನಾಯಕರು, ಗ್ಯಾರಂಟಿ ಕಾರ್ಯಕ್ರಮಗಳ ಜಾರಿಗೆ ಗಡುವು ನೀಡುತ್ತಿದ್ದಾರೆ. ಗಡುವು ನೀಡಲು ಸಂಸದ ಪ್ರತಾಪಸಿಂಹ ಯಾರು? ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಯೋಜನೆ, ಮೈಸೂರಿನಲ್ಲಿ ರೈಲ್ವೆ ಟರ್ಮಿನಲ್, ಮೈಸೂರು-ಕುಶಾಲನಗರ ರೈಲ್ವೆ ಯೋಜನೆ, ಏರ್‌ಪೋರ್ಟ್ ವಿಸ್ತರಣೆ, ಕಡಕೊಳದಲ್ಲಿ ಕೈಗಾರಿಕೆ ಸ್ಥಾಪನೆ ಭರವಸೆಗಳನ್ನು ಯಾಕೆ ಈಡೇರಿಸಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ದೊಡ್ಡ ಕಾಮಿಡಿಯನ್ ಆಗಿದ್ದಾರೆ. ಮೋದಿ ಅವರು ಹೋದ ಕಡೆಯೆಲ್ಲ ಹಸ್ತದ ಗುರುತು ತೋರಿಸಿ ನಮ್ಮ ಪರ ಪ್ರಚಾರ ಮಾಡುವ ಮೂಲಕ ಜೋಕರ್ ಪಕ್ಷ ಜೆಡಿಎಸ್ ಅನ್ನು ಮುಗಿಸಿದರು. ಅದಕ್ಕೆ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವ್ಯಂಗೋಕ್ತಿ ನುಡಿದರು.

ಬಹುಮತ ಬಾರದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇವೆಂದು ಹೇಳಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಾತು ಉಳಿಸಿಕೊಂಡು ಬಳಿಕ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡಲಿ. ಮುಂದಿನ ದಿನಗಳಲ್ಲಿ ಆ ಪಕ್ಷದ 19 ಶಾಸಕರಲ್ಲಿ 10 ರಿಂದ 12 ಶಾಸಕರು ಹೊರಹೋಗಲು ಮುಂದಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿದ ಕುರಿತು ಎಫ್‌ಐಆರ್ ದಾಖಲಾಗಿ 24 ಗಂಟೆ ಕಳೆದರೂ ಶಾಸಕ ಡಾ.ಅಶ್ವತ್ಥ ನಾರಾಯಣ ಅವರನ್ನು ಬಂಧಿಸದ ಕ್ರಮ ಖಂಡಿಸಿ ಡಿಜಿ ಮತ್ತು ಐಜಿ ಭೇಟಿ ಮಾಡುತ್ತೇನೆ. ಅದಕ್ಕೂ ಸ್ಪಂದಿಸದಿದ್ದರೆ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡ ಗಿರೀಶ್ ಇದ್ದರು.

ಪ್ರತಾಪ್ ಸಿಂಹಗೆ ಸವಾಲು

ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ನಿಮ್ಮ ಕೊಡುಗೆ ಏನು? ಲಿಂಗಾಯತ ಸಮುದಾಯ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ವಿ.ಸೋಮಣ್ಣ ಅವರನ್ನು ವರುಣ, ಚಾಮರಾಜನಗರಕ್ಕೆ ಕರೆತಂದು ಬಲಿಪಶು ಮಾಡಿದರು. ಬಿಜೆಪಿ ವಂಚನೆಗಳ ಬಗ್ಗೆ ಚರ್ಚಿಸಲು ಜೂ.1ರಂದು ಬೆಳಗ್ಗೆ 11ಕ್ಕೆ ಜಲದರ್ಶಿನಿಯ ಸಂಸದರ ಕಚೇರಿಗೆ ಬರಲು ಸಿದ್ಧ. ನಿಮ್ಮ ಪಕ್ಷದ ಭರವಸೆಗಳ ಬಗ್ಗೆ ಉತ್ತರ ನೀಡುತ್ತೀರಾ ಎಂದು ಪ್ರತಾಪ್ ಸಿಂಹ ಅವರಿಗೆ ಲಕ್ಷ್ಮಣ್ ಸವಾಲು ಹಾಕಿದರು.