ಜಿಲ್ಲೆ

ಕಾಂಗ್ರೆಸ್ ಕ್ಷಮೆ ಕೇಳಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಕ್ಷಮೆ ಕೇಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಪರ್ಸೆಂಟ್ ಸರ್ಕಾರ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂದು ಆವತ್ತೇ ಬಿಜೆಪಿ ಹೇಳಿತ್ತು. ಈಗ ಆ ಆರೋಪದಲ್ಲಿ ಹುರುಳಿಲ್ಲ ಎಂಬುದು ಲೋಕಾಯುಕ್ತ ತನಿಖೆಯಿಂದಲೂ ರುಜುವಾತಾಗಿದೆ. ಲೋಕಾಯುಕ್ತ ನ್ಯಾಯಾಲಯ ಸಹ ಇದು ಹುಸಿ ಆರೋಪ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರೇನು ಖರೀದಿಸಲು ಕುರಿ, ಕೋಣ, ಕತ್ತೆಗಳೇ? ಸಿಎಂ ತಮ್ಮ ಮತ್ತು ಸರ್ಕಾರದ ಮೇಲಿರುವ ಆರೋಪಗಳ ವಿಷಯಾಂತರಕ್ಕೆ ಹೀಗೆಲ್ಲ ಹೇಳುತ್ತಿದ್ದಾರೆ. ಶಾಸಕರ ಸಾರ್ವಜನಿಕ ಬದುಕನ್ನು ಹೀಗೆ ಕಲುಷಿತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿ ಆದವರು ಮಾಡಬಾರದು. ಬಿಜೆಪಿ 50 ಕೋಟಿ ಆಫರ್ ನೀಡಿದೆ ಎಂದು ಕಾಂಗ್ರೆಸ್ಸಿನ ಒಬ್ಬ ಶಾಸಕರಾದರೂ ಹೇಳಿದ್ದಾರೆಯೇ ಅಥವಾ ಮಧ್ಯವರ್ತಿಯನ್ನು ಹೆಸರಿಸಿ ಕಾಂಗ್ರೆಸ್ಸಿನ ಒಬ್ಬ ಶಾಸರಾದರೂ ಹೇಳಿದ್ದಾರೆಯೇ? ಮುಖ್ಯಮಂತ್ರಿ ಆದವರು ಜವಾಬ್ದಾರಿ ಅರಿತು ಮಾತನಾಡಬೇಕಾಗುತ್ತದೆ ಎಂದು ಕುಟುಕಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ನಿಭಾಯಿಸಲು ಆಗದ ಕಾರಣಕ್ಕೆ ಬಹುತೇಕ ಬಿಪಿಎಲ್, ಎಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸುತ್ತಿರಬಹುದು. ರಾಜ್ಯದಲ್ಲಿ ಅದೇಕೆ ರೇಷನ್ ಕಾರ್ಡ್ ರದ್ದುಪಡಿಸುತ್ತಿದ್ದಾರೊ ಗೊತ್ತಿಲ್ಲ. ಆದರೆ, ಬಡವರಿಗೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.