ಕುಶಾಲನಗರ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಶಾಲನಗರದ ಫೀಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ದೇಶದಲ್ಲಿ ಬಿಜೆಪಿಯ ಹಣ ಬಲ ಮತ್ತು ತೋಳ್ಬಲಗಳ ಮೂಲಕ ಚುನಾವಣೆ ಎದುರಿಸುವುದರ ಮಧ್ಯೆಯೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದರೆ ದೇಶವಾಸಿಗಳು ಬಿಜೆಪಿಯನ್ನು ತಿರಸ್ಕರಿಸಿದೆ ಎಂದರ್ಥ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣೆ ಎದುರಿಸುವುದು ಬಲಾಢ್ಯ ಮತ್ತು ರಾಕ್ಷಸಿ ಕೃತ್ಯದ ವಿರುದ್ಧದ ಹೋರಾಟ ಮಾಡಿದಂತೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯಪಟ್ಟರು.
ನಗರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಈಗ ಒಂದೊಂದೇ ರಾಜ್ಯ ಕಳೆದುಕೊಂಡಿದೆ. ದೆಹಲಿ ಕಾರ್ಪೊರೇಷನ್ ಕೂಡ ಗೆಲ್ಲಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶೇಕ್ ಖಲೀಮುಲ್ಲ, ಶಾಜಿ, ಯೂತ್ ಕಾಂಗ್ರೆಸ್ ಪ್ರಮುಖರಾದ ಶಿವು, ದೇವು, ಪಕ್ಷದ ಕಾರ್ಯಕರ್ತರಾದ ಜಮೀಲ್, ಶಕೀಲ್ ಅಹಮದ್, ನಂಜುಂಡಸ್ವಾಮಿ, ಎಂ.ಎಂ. ಪ್ರಕಾಶ್ , ಚಂದ್ರು, ಅಜ್ಗರ್, ಚಂದನ್, ಉಸ್ಮಾನ್, ಪರಮೇಶ್, ಕೃಷ್ಣ, ಅಫಾನ್, ಶಿವು, ರೋಷನ್, ಅಜಿತ್, ನಾಗೇಂದ್ರ, ಚಂದ್ರ, ಮುಸ್ತಫ, ಧರ್ಮಪ್ಪ, ದಯಾನಂದ, ಜೋಸೆಫ್, ಶಫಿ, ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.