ಕುಶಾಲನಗರದಲ್ಲಿ ಶನಿವಾರ ಶಾಸಕ ಡಾ.ಮಂಥರ್‌ಗೌಡ ಅವರನ್ನು ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. 
ಜಿಲ್ಲೆ

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಕುಶಾಲನಗರ: ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ ಪ್ರಚಂಡ ಬಹುಮತದಿಂದ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, 5 ಬಾರಿ ಗೆದಿದ್ದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ವಿರುದ್ಧ ಮಂಥರ್‌ಗೌಡ ಗೆಲ್ಲಬೇಕೆಂದು ಕ್ಷೇತ್ರದ ಜನರು ಆಶಯ ಹೊಂದಿದ್ದರು. ಅದರಂತೆ ಪಕ್ಷಾತೀತವಾಗಿ ಕಾಂಗ್ರೆಸ್ ಗೆಲುವು ಕಂಡಿದೆ ಎಂದರು.

ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ, ಎಸ್‌ಡಿಪಿಐ ಅಭ್ಯರ್ಥಿ ಅಮೀನ್ ಮೊಹಿಸಿನ್ ಹಾಗೂ ಇತರ ಅಭ್ಯರ್ಥಿಗಳು ಚುನಾವಣೆ ಕೊನೆಯ ಕ್ಷಣದಲ್ಲಿ ತಟಸ್ಥವಾದ ಕಾರಣ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಕದನ ನಡೆಯಿತು. ಮತ ಎಣಿಕೆಯ ಪ್ರಾರಂಭದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಥರ್‌ಗೌಡ ಮುನ್ನಡೆ ಸಾಧಿಸಿದ್ದು, ಕೊನೆಯ 20ನೇ ಸುತ್ತಿನವರೆಗೂ ಮಂಥರ್‌ಗೌಡ ಮುನ್ನಡೆ ಸಾಧಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ 25 ವರ್ಷಗಳ ಬಿಜೆಪಿಯ ಕೆಟ್ಟ ಆಡಳಿತಕ್ಕೆ ಮತದಾರರು ತಕ್ಕಪಾಠ ಕಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮಂಥರ್‌ಗೌಡ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಇನ್ನೂ ಐದು ವರ್ಷಗಳಲ್ಲಿ ಕೊಡಗು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿ ಆಗಿರುತ್ತದೆ ಎಂದರು.

ಕುಶಾಲನಗರ ನಗರ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದ ಹೃದಯಭಾಗದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಜಯಘೋಷದ ನಡುವೆ ನೃತ್ಯ ಮಾಡುತ್ತ ಸಂಭ್ರಮಿಸಿದರು.

ಪಕ್ಷದ ಸ್ಥಳೀಯ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಶಿವಶಂಕರ್, ಎಂ.ಈ.ಮುಸ್ತಫಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಲೀಮುಲ್ಲಾ, ಪ್ರಮುಖರಾದ ಹರೀಶ್, ಅಶೋಕ್, ಜಗದೀಶ್ ಮತ್ತಿತರರು ಹಾಜರಿದ್ದರು.