ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಹೋಬಳಿಯ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಆದಿತ್ಯ ಎಂಬುವವರು ಯುವತಿಯರು ಮತ್ತು ಪರಿಚಿತರ ಪತ್ನಿಯರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ವ ಪಕ್ಷದ ಕಾರ್ಯಕರ್ತರೇ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಆದಿತ್ಯ ಯುವತಿಯರು ಹಾಗೂ ಮಹಿಳೆಯರಿಗೆ ಕಳುಹಿಸಿದ್ದರು ಎಂಬ ಅಶ್ಲೀಲ ಸಂದೇಶಗಳನ್ನು ಇಟ್ಟುಕೊಂಡು ಮನೆಗೆ ನುಗ್ಗಿದ ಕಾರ್ಯಕರ್ತರು ಪತ್ನಿ ಎದುರೇ ಆದಿತ್ಯಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಆದಿತ್ಯನ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಹಲ್ಲೆ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಮ್ಮ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ತಮ್ಮ ಪರಿಚಯಸ್ಥರಿಗೆ ಆದಿತ್ಯ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜಯನಗರದ ಮಹಿಳೆಯೋರ್ವರು ಆದಿತ್ಯ ವಿರುದ್ಧ ಚಿಕ್ಕಮಗಳೂರು ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ಆದಿತ್ಯನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.