ಜಿಲ್ಲೆ

ಕಾಂಗ್ರೆಸ್-ಕಮ್ಯುನಿಸ್ಟರಿಗೆ ಹುಬ್ಬಳ್ಳಿ ಸಭೆ ಉತ್ತರಿಸುವಂತಿರಲಿ

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಜನಜಾಗೃತಿ ಸಭೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಗೆ ಉತ್ತರ ನೀಡುವಂತೆ ಇರಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕುರಿತ ಜನಜಾಗೃತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪರವಾಗಿ ಬಿಜೆಪಿ ತೆಗೆದುಕೊಳ್ಳುವ ನಿರ್ಣಯಗಳನ್ನು ಮತ್ತೊಮ್ಮೆ ವಿರೋಧಿಸಬಾರದೆಂಬುದು ಕಾಂಗ್ರೆಸ್​ನವರಿಗೆ ಮನವರಿಕೆಯಾಗಬೇಕಿದೆ ಎಂದರು.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಜನಜಾಗೃತಿ ಸಭೆಯಲ್ಲಿ ಧಾರವಾಡ ಜಿಲ್ಲೆಯ ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್​ನವರು ದೇಶದ ಪರವಾಗಿ ತೆಗೆದುಕೊಳ್ಳುವ ನಿರ್ಣಯಗಳನ್ನು ವಿರೋಧಿಸುತ್ತಿದ್ದಾರೆ. ಆ ಪಕ್ಷದವರಿಗೆ ಯಾವ ವಿಷಯಗಳನ್ನು ವಿರೋಧಿಸಬೇಕೆಂಬುದೇ ತಿಳಿಯದಂತಾಗಿದೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಈ ಕಾಯ್ದೆ ಬಗ್ಗೆ ಮುಸ್ಲಿಮರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಮುಸ್ಲಿಮರು ಹೆಚ್ಚು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ, ಅವರೊಂದಿಗೆ ಸಂವಾದ ನಡೆಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮಾಡುವ ಅಪಪ್ರಚಾರಕ್ಕೆ ಮುಸ್ಲಿಮರು ಕಿವಿಗೊಡಬಾರದು. ಈ ಕಾಯ್ದೆಗೂ ದೇಶದ ಮುಸ್ಲಿಮರು ಸೇರಿ ಯಾವುದೇ ಧರ್ಮದವರಿಗೆ ಸಂಬಂಧ ಇಲ್ಲ. ಈ ಬಗ್ಗೆ ಅರಿವಿದ್ದರೂ ಕಾಂಗ್ರೆಸ್​ನವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಇನ್ನಿತರರಿದ್ದರು.

ದಕ್ಷಿಣ ಭಾರತದಲ್ಲೇ ಮೊದಲು: ಪೌರತ್ವ ತಿದ್ದುಪಡಿ ಕಾಯ್ದೆ ರೂವಾರಿ ಆಗಿರುವ ಅಮಿತ್ ಷಾ ಅವರು ಜನಜಾಗೃತಿಗಾಗಿ ಪಾಲ್ಗೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ಸಮಾವೇಶ ಹುಬ್ಬಳ್ಳಿಯದು. ಹೀಗಾಗಿ, ಅದು ಭರ್ಜರಿ ಯಶಸ್ವಿಯಾಗಬೇಕು ಎಂದು ಬಿಜೆಪಿ ಪಡೆ ಸಂಕಲ್ಪ ಮಾಡಿದೆ. ಅಲ್ಲದೇ, ಉತ್ತರ ಕರ್ನಾಟಕವು ಬಿಜೆಪಿಯ ಗಟ್ಟಿ ನೆಲೆಯಾಗಿದ್ದು, ಇಲ್ಲಿ ಪ್ರತಿಪಕ್ಷಗಳು ಪೌರತ್ವ ಕಾಯ್ದೆ ವಿಷಯ ಇಟ್ಟುಕೊಂಡು ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸುವುದನ್ನು ಸಂಪೂರ್ಣ ವಿಫಲಗೊಳಿಸುವ ಉದ್ದೇಶವೂ ಇದರಲ್ಲಿದೆ.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾಲ್ಗೊಳ್ಳಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಭೆಯ ಸಿದ್ಧತೆಗಳಿಗಾಗಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಲಾಗುತ್ತಿದೆ. ಜ. 15ಕ್ಕೆ ನೆಹರು ಮೈದಾನದಲ್ಲಿ ಪೆಂಡಾಲ್ ಹಾಕಲಾಗುತ್ತದೆ. ವೇದಿಕೆಯಲ್ಲಿ ಎಷ್ಟು ಜನ ಮುಖಂಡರು ಆಸೀನರಾಗಬೇಕು ಮತ್ತು ಇತರ ವಿಷಯಗಳ ಬಗ್ಗೆ ಒಂದೆರೆಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. | ಮಹೇಶ ಟೆಂಗಿನಕಾಯಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ