ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು. 
ಜಿಲ್ಲೆ

ಕಾಂಗ್ರೆಸ್ ಇನ್ನೆಂದೂ ಅಧಿಕಾರಕ್ಕೆ ಬಾರದು

ಬೆಳಗಾವಿ: ಕಾಂಗ್ರೆಸ್ ಇನ್ನೆಂದೂ ಅಧಿಕಾರಕ್ಕೆ ಬಾರದು. ಇಂತಹ ಅಸಾಧ್ಯದ ಸನ್ನಿವೇಶದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಆದರೆ, ಅದೆಂದೂ ನನಸಾಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದಲಿತ ಸಿಎಂ ಮಾಡಲಿ ನೋಡೋಣ ಎನ್ನುವ ಕಾಂಗ್ರೆಸ್, ಸ್ವತಃ ಅಧಿಕಾರದಲ್ಲಿದ್ದಾಗ ಅವರು ಎಷ್ಟು ದಲಿತರನ್ನು ಸಿಎಂ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದರು.

ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ದಿನವೂ ಕೆಟ್ಟ ಕನಸು ಬೀಳುತ್ತಿವೆ. ಚುನಾವಣೆಗೂ ಮುನ್ನವೇ ಡಿ.ಕೆ. ಶಿವಕುಮಾರ ಹಾಗೂ ಅವರ ನಡುವೆ ಕಿತ್ತಾಟ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ವಿಚಾರವಾಗಿ ಬಿಜೆಪಿ ಏಕೆ ಸ್‌ಟಾ ಆಗಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿ, ‘ಇನ್ನೇನು ಅವರನ್ನು ಕರೆಯಿಸಿ ಹೊಡೆಯಬೇಕಾ?’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನನ್ನ ಬಗ್ಗೆ ತಿಳಿದು ಮಾತನಾಡಿ: ನನ್ನ ಕ್ಷೇತ್ರದ ಜನ ನಾಲ್ಕು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನನಗೆ ನಾಗಪುರ ಸಂಸ್ಕೃತಿ ಇದೆ ಎನ್ನುವ ಕಾಂಗ್ರೆಸ್‌ನವರು, ಈಶ್ವರಪ್ಪ ವಿರುದ್ಧ ಯಾವುದೇ ಕೇಸ್ ಇಲ್ಲ. ಜೈಲಿಗೆ ಹೋಗಿ ಬಂದವನಲ್ಲ ಎಂಬ ವಿಚಾರ ಅರಿತುಕೊಳ್ಳಬೇಕು. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆಮಸಿ ಬಳಿಯುವುದಾಗಿ ಹೇಳಿ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೈ ಪಾಳಯ ಧೂಳೀಪಟ ನಿಶ್ಚಿತ

ಹಿಂದುಗಳು ಅಪಾರ ಪ್ರಮಾಣದಲ್ಲಿ ಬಿಜೆಪಿ ಪರವಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ ನಡೆದರೂ ಸುಮ್ಮನೆ ಇದ್ದರು. ವಿನಾಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ, ಅಂತಹ ಪ್ರಕರಣಗಳನ್ನು ನಾವು ಹಿಂಪಡೆಯುತ್ತೇವೆ. ಸದ್ಯ ಕಾಂಗ್ರೆಸ್‌ಪರ ಕೆಲವೇ ಕೆಲವು ಮುಸ್ಲಿಮರು ವಾಲಿದ್ದಾರೆ. ಅವರೂ ಶೀಘ್ರದಲ್ಲೇ ಬಿಜೆಪಿಗೆ ಬರಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗುವುದು ನಿಶ್ಚಿತ ಎಂದು ಸಚಿವ ಈಶ್ವರಪ್ಪ ಹೇಳಿದರು. ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ದಲಿತರ ಮೀಸಲಾತಿ ತೆಗೆದು ಹಾಕುತ್ತಾರೆ. ಇಲ್ಲಿನ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಓಡಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಹಾಗಾಯಿತೇ? ಎಲ್ಲಿಯವರೆಗೆ ದಲಿತರು ಸಮಾನತೆಯ ಸ್ವಾಭಿಮಾನದಿಂದ ಬದುಕುತ್ತಾರೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರಿಯುತ್ತದೆ. ಓರ್ವ ದಲಿತ ವ್ಯಕ್ತಿಯನ್ನೇ ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ ಎನ್ನುವುದನ್ನು ಮೊದಲು ಅರಿತುಕೊಳ್ಳಿ ಎಂದು ಸಚಿವ ಈಶ್ವರಪ್ಪ ಸಲಹೆ ನೀಡಿದರು.

ಸರ್ಕಾರ ರಚನೆ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಸಹಜ. ಇದೀಗ ಎರಡ್ಮೂರು ವಿಚಾರದಲ್ಲಿ ಆನಂದ ಸಿಂಗ್ ಅಸಮಾಧಾನವಾಗಿದ್ದಾರೆ ಎಂದು ತಿಳಿದುಕೊಂಡಿದ್ದೇನೆ. ಅದನ್ನು ಸಿಎಂ ಬಗೆ ಹರಿಸಲಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ನನ್ನ ಸಹೋದರಿಯಿದ್ದಂತೆ. ಅವರ ಮೇಲೆ ಯಾವುದೇ ಆರೋಪಗಳೂ ಇಲ್ಲ. ಹಾಗಾಗಿ, ತನಿಖೆಯ ಅಗತ್ಯವೇ ಇಲ್ಲ.| ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ