ಕಲಬುರಗಿ: ಅಕ್ಕಿ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲೂ ವಿಫಲವಾಗಿದೆ. ಅಧಿಕಾರಕ್ಕೆ ಬಂದ ೩೦ ದಿನದಲ್ಲೇ ಜನಾಕ್ರೋಶಕ್ಕೆ ಗುರಿಯಾಗಿದೆ. ಹೀಗಾಗಿ ಸರ್ಕಾರದ ಆಯುಷ್ಯ ಬಹಳ ಕಡಿಮೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಭವಿಷ್ಯ ನುಡಿದಿದ್ದಾರೆ.
ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷ ಆಡಳಿತ ಮಾಡಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ಹಿಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಭ್ರಷ್ಟಾಚಾರರಹಿತ ಆಡಳಿತ ನೀಡಿವೆ. ಬಿಜೆಪಿಗೆ ಈ ಸೋಲು ಮೊದಲಲ್ಲ. ಇದನ್ನು ಸವಾಲಾಗಿ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಎದೆಗುಂದಬಾರದು. ಪಕ್ಷದ ನಾಯಕರು ಸದಾ ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ ಎಂದು ಆತ್ಮಸ್ಥೈರ್ಯ ತುಂಬಿದರು.
ಮತದಾರರ ಓಲೈಕೆಗಾಗಿ ಮಾತ್ರ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ತಂದಿದೆ. ಬಡವರು, ಆರ್ಥಿಕ ದುರ್ಬಲರ ಏಳಿಗೆ ಇದರಲ್ಲಿ ಅಡಗಿಲ್ಲ. ಜನರಿಗೆ ಈಗ ಅರ್ಥವಾಗುತ್ತಿದೆ. ಸರ್ಕಾರ ರಚನೆಯಾಗಿ ೩೦ ದಿನದಲ್ಲಿ ಜನ ಬೀದಿಗೆ ಬಂದು ಹೋರಾಟದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ದೂರಿದರು.
ಚುನಾವಣಾ ಫಲಿತಾಂಶದ ನಂತರ ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಧಾನಿ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ, ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸುವ ಮೂಲಕ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸನ್ನದ್ಧರಾಗಬೇಕಿದೆ. ಈ ಹಿಂದೆ ಏನಾಯಿತು ಎಂದು ಪರಾಮರ್ಶೆ ಮಾಡುವ ಕಾಲ ಇದಲ್ಲ. ಮುಂದೆ ಬರುವ ಚುನಾವಣೆ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಂಸದರಾದ ಡಾ.ಉಮೇಶ ಜಾಧವ್, ಕರಡಿ ಸಂಗಣ್ಣ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ್, ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಯುವ ಮುಖಂಡ ಚಂದು ಪಾಟೀಲ್, ಪ್ರಮುಖರಾದ ಶರಣಪ್ಪ ತಳವಾರ, ಶಶಿಕಲಾ ಟೆಂಗಳಿ, ವಿದ್ಯಾಸಾಗರ ಶಾಬಾದಿ, ಉಮೇಶ ಪಾಟೀಲ್, ಧರ್ಮಣ್ಣ ದೊಡ್ಡಮನಿ, ಪಾಲಿಕೆ ಮೇಯರ್ ವಿಶಾಲ ದರ್ಗಿ, ಶೋಭಾ ಬಾಣಿ ಇತರರಿದ್ದರು.
ಪಕ್ಷದ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಸ್ವಾಗತಿಸಿದರು. ಮಹಾದೇವ ಬೆಳಮಗಿ ನಿರೂಪಣೆ ಮಾಡಿದರು. ೨ನೇ ಅವಧಿಗೆ ಶಾಸಕರಾದ ಬಸವರಾಜ ಮತ್ತಿಮಡು ಮತ್ತು ಡಾ.ಅವಿನಾಶ ಜಾಧವ್ ಅವರನ್ನು ಸತ್ಕರಿಸಲಾಯಿತು.