ಬಳ್ಳಾರಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಅವ್ಯವಹಾರ ನಡೆದಿರುವುದನ್ನು ಖಂಡಿಸಿ, ಜಿಲ್ಲಾ ಬಿಜೆಪಿ ಘಟಕಾದಿಂದ ಇಲ್ಲಿನ ಕನಕದುರ್ಗಮ್ಮ ದೇವಸ್ಥಾನದಿಂದ ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ, ಡಿಸಿ ಪ್ರಶಾಂತ ಕುಮಾರ ಮಿಶ್ರಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ವಿಧಾನಪರಿಷತ ಸಚೇತಕ ರವಿಕುಮಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದ ರಾಯಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸಚಿವ ಬಿ.ನಾಗೇಂದ್ರದ ಭಾವಚಿತ್ರದ ಪ್ರತಿಕೃತಿಯನ್ನು ದಹನ ಮಾಡಿದರು. ಕೆಲ ಪ್ರತಿಭಟನ ನಿರತ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟು ಅಕ್ರೋಶ ಹೊರಹಾಕಿದರು. ನೂರರು ಕೋಟಿ ದರೋಡೆ ಮಾಡಿದ ಸಚಿವ ನಾಗೇಂದ ರಾಜಿನಾಮೆ ಕೊಡಬೇಕು, ಕ್ರೈಮ್ ಕರ್ನಾಟಕವನ್ನು ಅವರಿಸಿದೆ ಕಾಂಗ್ರೆಸ್ ಪಕ್ಷವನ್ನು ಕೊನೆಗಾಣಿಸೋಣ, ಎಲ್ಲಿ ನೋಡಿದರಲ್ಲಿ ಕೊಲೆ, ಗಲಭೆ, ಅಕ್ರಮ, ದಾಂಧಲೆ, ದಬ್ಬಾಳಿಕೆ ತಾಂಡಾವಡುತ್ತಿದೆ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ, ನಿಲ್ಲಿಸಿ ನಿಲ್ಲಿಸಿ ಅಧಿಕಾರಿ ಮೇಲೆ ದಬ್ಬಾಳಿಕೆ ನಿಲ್ಲಿಸಿ ಎಂಬ ಪೋಸ್ಟರ್‌ಗಳು ಹಿಡಿದು ರ‌್ಯಾಲಿ ನಡೆಸಿದರು. ಕಾಂಗ್ರೆಸ್ ಪಕ್ಷ, ಸಿಎಂ, ಡಿಸಿಎಂ ಹಾಗೂ ಸಚಿವ ಬಿ. ನಾಗೇಂದ್ರ ವಿರುದ್ಧ ಘೋಷಣೆ ಕೂಗಿದರು.
ವಿಧಾನಪರಿಷತ್ ಸಚೇತಕ ರವಿಕುಮಾರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವ ಬಿ.ನಾಗೇಂದ್ರ ಕಾರಣರಾಗಿದ್ದಾರೆ. ಆದ್ದರಿಂದ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ ಅತ್ಮಹತ್ಯೆ ಮಾಡಿಕೊಂಡ ವೇಳೆ ಇದೇ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ರಾಜ್ಯಾದ್ಯಂತ ಪ್ರತಿಭಟಿಸಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಈಗ ಅವರ ಸಂಪುಟದ ಸಚಿವರ ವಿರುದ್ಧವೇ ಅಕ್ರಮ ಅವ್ಯವಹಾರ ಆರೋಪದ ಮೇಲೆ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ನಾಯಕರು ಏಕೆ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಕೂಡಲೇ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಿ, ತಪ್ಪಿಸ್ಥರ ವಿರುದ್ಧ ಕ್ರಮವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುತ್ತಿಗೆನೂರು ವಿರುಪಾಕ್ಷಗೌಡ, ರಾಮಲಿಂಗಪ್ಪ, ಸಾಧನ ಹಿರೇಮಠ, ಎಚ್. ಹನುಮಂತಪ್ಪ, ಡಾ. ಎಸ್.ಜೆ.ವಿ.ಮಹಿಪಾಲ್, ಉಡೇದ ಸುರೇಶ, ಸುಗುಣಾ, ನಾಗವೇಣಿ, ವಿಜಯಲಕ್ಷ್ಮಿ ಇತರರಿದ್ದರು