ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ವಿರೋಧಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ ದೂರಿದ್ದಾರೆ.
ರಾಜ್ಯದಲ್ಲಿ ಹಿಂದು ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ದಬ್ಬಾಳಿಕೆ, ಕೊಲೆ, ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಉತ್ತಮ ನಿದರ್ಶನ. ಅಲ್ಲದೆ, ಶಾಂತಿ-ಸೌಹಾರ್ದತೆ ಕದಡುತ್ತಿದೆ ಎಂದು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.
ಲವ್ ಜಿಹಾದ್, ಬಲವಂತದ ಮತಾಂತರ ಸೇರಿ ಹಿಂದು ಯುವತಿಯರನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಇಂತಹ ಪ್ರಕರಣ ಮರುಕಳಿಸುತ್ತಿದ್ದರೂ ಕಾಂಗ್ರೆಸ್ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ನೇಹಾ ಹತ್ಯೆ ಪ್ರಕರಣ ಕಾಂಗ್ರೆಸ್ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ.