ಜಿಲ್ಲೆ

ಕಾಂಗ್ರೆಸ್ ಅವಧಿಯ ಸಾಧನೆ ಜನರಿಗೆ ತಿಳಿಸಿ

ಕಾರವಾರ: ಕ್ಷೇತ್ರದ ಮಾಜಿ ಶಾಸಕ ಸತೀಶ ಸೈಲ್ ಕಾಂಗ್ರೆಸ್ ಪಕ್ಷ ಸಂಘನಾ ಕಾರ್ಯ ಕೈಗೊಂಡು, ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಅವರು ಕಳೆದ ಕೆಲ ತಿಂಗಳಿಂದ ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಇದ್ದ ಕಾರಣ ಸೈಲ್ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಹುಡುಕುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸೋಮವಾರ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆ ನಡೆಸುವ ಮೂಲಕ ಅವರು ಊಹಾಪೋಹಗಳಿಗೆ ತೆರೆ ಎಳೆದರು.
ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಆಯೋಜನೆಯಾಗಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಮೆಡಿಕಲ್ ಕಾಲೇಜ್, ಕೆರವಡಿ-ಉಳಗಾ ಸೇತುವೆ, ನಗರಸಭೆ ಹೊಸ ಕಟ್ಟಡ, ಹೊಸ ಐಬಿ, ಮೀನು ಮಾರುಕಟ್ಟೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂತಾದ ಕಾಮಗಾರಿಗಳು ನನ್ನ ಅವಧಿಯಲ್ಲೇ ಮಂಜೂರಾಗಿವೆ. ಬಹು ವರ್ಷಗಳಿಂದ ಬಾಕಿ ಇದ್ದ ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ಕೊಡಲಿಸಲು ಕಾರಣನಾಗಿದ್ದೇನೆ. ನ್ಯಾಯಾಂಗ ಹೋರಾಟ ಮಾಡಿ ಕಾರವಾರ ಬಂದರು ಕಾಮಗಾರಿ ನಿಲ್ಲಿಸಲಾಗಿದೆ. ಇವುಗಳನ್ನೆಲ್ಲ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು. ಈಗಿನ ಶಾಸಕಿ ರೂಪಾಲಿ ನಾಯ್ಕ ಮಾತನಾಡುವುದು ಬಿಟ್ಟರೆ ಬೇರೆ ಕೆಲಸ ಮಾಡುತ್ತಿಲ್ಲ. ಕೇವಲ ಗುಮಟೆ ಪಾಂಗ್ ಬಾರಿಸುವುದರಿಂದ ಕೆಲಸ ಆಗುವುದಿಲ್ಲ ಎಂದು ಟೀಕಿಸಿದರು. ಕ್ರಿಮ್್ಸ ಆಸ್ಪತ್ರೆ ಖಾಸಗಿ ಆಸ್ಪತ್ರೆಯಂತಾಗಿದೆ. ಕೆಲವು ವೈದ್ಯರನ್ನು ಬಿಟ್ಟು ಬೇರೆಯವರು ಬಡ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ದೂರುಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸಲಹೆ ನೀಡಲು 11 ಜನರ ಸಮಿತಿ ರಚನೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಅಧ್ಯಕ್ಷತೆಯಲ್ಲಿ ಸಮಿತಿಯ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ತಾಲೂಕಿನ ಪಕ್ಷದ ಆಗು ಹೋಗುಗಳಿಗೆ ಸ್ಪಂದಿಸಲು, ಸಲಹೆ ನೀಡಲು 11 ಜನ ಮುಖಂಡರ ಸಮಿತಿಯನ್ನು ಸಭೆಯಲ್ಲಿ ರಚಿಸಲಾಯಿತು. ಪಕ್ಷದ ಹಿರಿಯ ಮುಖಂಡ ಪ್ರಭಾಕರ ಮಾಳ್ಸೇಕರ್, ಜಿಪಂ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ನಡುವೆ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ಜಿಲ್ಲಾ ವಕ್ತಾರ ಶಂಭು ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆಯಿತು. ಹಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.