ಹನೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಶಾಸಕ ಅರ್.ನರೇಂದ್ರ ಮಾತನಾಡಿದರು. ಈಶ್ವರ್, ಬಸವರಾಜು, ಮುರುಡೇಶ್ವರಸ್ವಾಮಿ, ಚೇತನ್ ದೊರೆರಾಜು, ಮಾದೇಶ್, ಗಿರೀಶ್, ಬಾಲರಾಜನಾಯ್ಡು, ಸುಧಾ ಇದ್ದರು. 
ಜಿಲ್ಲೆ

ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿ

ಹನೂರು: ಹನೂರು ಕ್ಷೇತ್ರದಿಂದ ಆರ್.ನರೇಂದ್ರ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಮ್ಮತದಿಂದ ಹೇಳಿದರು.
ವಿಧಾನಸಭಾ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಆರ್.ನರೇಂದ್ರ ಮನವಿ ಮೇರೆಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಮ್ಮತದ ತೀರ್ಮಾನ ತೆಗೆದುಕೊಂಡರು.

ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ಪಣ ತೊಟ್ಟಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಜನಮನ್ನಣೆ ಗಳಿಸಿದ್ದಾರೆ. ಇದರ ಫಲವಾಗಿಯೇ ಸತತ 3 ಬಾರಿ ಜಯಗಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹನೂರು ತಾಲೂಕು ರಚನೆ, 108 ಕೋಟಿ ರೂ.ವೆಚ್ಚದಲ್ಲಿ ಕೆ.ಶಿಪ್ ಯೋಜನೆಯಡಿ ಕೊಳ್ಳೇಗಾಲದಿಂದ ಹನೂರಿನವರೆಗೆ ರಸ್ತೆ ಅಭಿವೃದ್ಧಿ, 132 ಕೋಟಿ ರೂ.ವೆಚ್ಚದಲ್ಲಿ ರಾಮನಗುಡ್ಡೆ, ಹುಬ್ಬೆಹುಣಸೆ ಹಾಗೂ ಗುಂಡಾಲ್ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವುದು, 192 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹನೂರಿನಲ್ಲಿ ಸಾರಿಗೆ ಬಸ್ ನಿಲ್ದಾಣ ಸ್ಥಾಪನೆ, ಏಕಲವ್ಯ, ಮುರಾರ್ಜಿ ದೇಸಾಯಿ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳ ಸ್ಥಾಪನೆ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, 135 ಸಮುದಾಯ ಭವನಗಳ ನಿರ್ಮಾಣ, 12 ಪಿಯು ಕಾಲೇಜು ಸ್ಥಾಪನೆ, ಕೋಟ್ಯಂತರ ರೂ. ವೆಚ್ಚದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, 1800 ಗಿರಿಜನರಿಗೆ ಅರಣ್ಯ ಕಾಯ್ದೆಯಡಿ ಭೂಮಿಹಕ್ಕು ಪತ್ರ ವಿತರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕೈಗೊಂಡು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದ್ದರಿಂದ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಗೆಲ್ಲುತ್ತಾರೆ ಎಂದು ಸಭೆಯಲ್ಲಿದ್ದವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಆರ್.ನರೇಂದ್ರ ಮಾತನಾಡಿ, ನಮ್ಮ ಕುಟುಂಬದ ಮೇಲೆ ವಿಶ್ವಾಸವಿಟ್ಟು 3 ಬಾರಿ ಗೆಲ್ಲಿಸಿದ್ದು, ಎಲ್ಲರ ಒತ್ತಾಸೆಯಂತೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇದೀಗ ಗೋಪಿನಾಥಂ ಡ್ಯಾಂಗೆ ನೀರು ತುಂಬಿಸಲು 19 ಕೋಟಿ ರೂ.ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮಾರ್ಟಳ್ಳಿ ಕೆರೆಗೆ ನೀರು ತುಂಬಿಸಲು ಕ್ರಮವಹಿಸಲಾಗಿದೆ. ಉಡುತೊರೆ ಡ್ಯಾಂಗೆ ನೀರು ತುಂಬಿಸುವ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದರು.\

ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದ್ದು, ನಿಮ್ಮ ತೀರ್ಮಾನ ಅಗತ್ಯವಾಗಿದೆ. ಇದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಮಿಷಗಳಿಗೆ ಮರುಳಾಗಬೇಡಿ: 15 ವರ್ಷದಿಂದಲೂ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿದ್ದೇನೆ. ಆದರೆ ಇತ್ತೀಚೆಗೆ ಕೆಲವರು ರಾಜಕೀಯವಾಗಿ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಬೇರೆಡೆಯಿಂದ ಹನೂರು ಕ್ಷೇತ್ರಕ್ಕೆ ಆಗಮಿಸಿದ್ದು, ಸಮಾಜ ಸೇವೆ ನೆಪದಲ್ಲಿ ಜನರಿಗೆ ಹಣ ನೀಡಿ ಮರಳು ಮಾಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಮಿಷಕ್ಕೆ ಒಳಗಾಗಿ ಅಸ್ತಿತ್ವ ಕಳೆದುಕೊಳ್ಳಬಾರದು ಎಂದು ಶಾಸಕರು ಕಿವಿಮಾತು ಹೇಳಿದರು.

ಸಭೆಯಲ್ಲಿ ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಹನೂರು ಅಧ್ಯಕ್ಷ ಮಾದೇಶ್, ಪಪಂ ಉಪಾಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಬಾಲರಾಜನಾಯ್ಡು, ಗ್ರಾಪಂ ಅಧ್ಯಕ್ಷೆ ಸುಧಾ, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಮುಕುಂದವರ್ಮ, ಸಿದ್ದರಾಜು, ನಾಗರಾಜು, ಪುಟ್ಟರಾಜು, ಮಹೇಶ್, ಮಂಜೇಶ್ ಇತರರು ಇದ್ದರು.