ಕೆ.ಆರ್.ನಗರದಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್‌ಗೆ ಕುಟುಂಬಸ್ಥರು ಮತ್ತು ಮುಖಂಡರು ಶುಭಾಶಯ ಕೋರಿದರು. 
ಜಿಲ್ಲೆ

ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ನಾಮಿನೇಷನ್

ಕೆ.ಆರ್.ನಗರ: ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಬುಧವಾರ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಹಿರಿಯ ಮುಖಂಡರಾದ ಎಸ್.ಪಿ.ತಮ್ಮಯ್ಯ, ಸಿ.ಪಿ.ರಮೇಶ್, ಮಂಜುರಾಜ್, ಕಲ್ಲಹಳ್ಳಿ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಸೈಯದ್‌ಸಿದ್ದಿಕ್ ಸಾಥ್ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀ ತೋಪಮ್ಮನವರ ದೇವಾಲಯದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ ಡಿ.ರವಿಶಂಕರ್, ತೆರದ ವಾಹನದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಮಾರ್ಗಮಧ್ಯೆ ಡಾ.ಬಿ.ಆರ್.ಅಂಬೇಡ್ಕರ್, ಕೃಷ್ಣರಾಜ ಒಡೆಯರ್, ಡಾ.ಜಗಜೀವನ್‌ರಾಂ ಹಾಗೂ ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಂಗಳವಾದ್ಯ, ನಗಾರಿ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದರು.

ಮೈಸೂರು-ಹಾಸನ ಮುಖ್ಯ ರಸ್ತೆಯ ಎರಡೂ ಬದಿಯಲ್ಲೂ ಪಕ್ಷದ ಕಾರ್ಯಕರ್ತರು, ಮುಖಂಡರು, ಹಾಗೂ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಜಯಕಾರ ಕೂಗಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಜಯಕಾರ ಕೂಗಿ ಸಂಭ್ರಮಿಸಿದರು.

ನಾಮಪತ್ರ ಸಲಿಕೆ ನಂತರ ಮಾತನಾಡಿದ ಡಿ.ರವಿಶಂಕರ್, ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮುಂದೆ ನಡೆಯುವ ಪ್ರಚಾರ ಸಭೆ ಮತ್ತು ಸಮಾವೇಶಗಳಲ್ಲಿ ಜಿಲ್ಲೆಯ ಮುಖಂಡರು ನನಗೆ ಸಾಥ್ ನೀಡಲಿದ್ದಾರೆ ಎಂದರು.


ಡಿ.ರವಿಶಂಕರ್ ತಂದೆ ದೊಡ್ಡಸ್ವಾಮೇಗೌಡ, ತಾಯಿ ವನಜಾಕ್ಷಮ್ಮ, ಪತ್ನಿ ಸುನೀತಾ, ಸಹೋದರರಾದ ಡಾ.ಡಿ.ರಾಜೀವ್, ಡಿ.ಪ್ರಶಾಂತ್, ಎಂಸಿಡಿಡಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ.ದೇವರಹಟ್ಟಿ, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಜಾವಿದ್ ಪಾಷ, ಪುರಸಭಾ ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಮಿಕ್ಸರ್‌ಶಂಕರ್, ಶಿವುನಾಯಕ್, ಶಂಕರ್ ಸ್ವಾಮಿ, ಕೋಳಿ ಪ್ರಕಾಶ್, ನಟರಾಜ್ ಇತರರು ಇದ್ದರು.