ಮೈಸೂರು: ಮುಸ್ಲಿಮರಿಗೆ ಕಾನೂನು ಬಾಹಿರವಾಗಿ ಕಾಂಗ್ರೆಸ್ ನೀಡಿದ್ದ ಮೀಸಲಾತಿಯನ್ನು ಹಿಂಪಡೆದು ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯತರಿಗೆ ಹಂಚಿಕೆ ಮಾಡಲಾಗಿದ್ದು, ಈ ಮೀಸಲಾತಿ ಉಳಿಯಬೇಕಾದರೆ ಹಿಂದುಗಳು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ. ಮಹೇಶ್ ಹೇಳಿದರು.
ನಗರ ಹೊರವಲಯದ ಎಚ್.ಡಿ. ಕೋಟೆ ರಸ್ತೆಯ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ಮೈಸೂರು ಮಹಾನಗರ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡ ಸಮುದಾಯಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮುಸ್ಲಿಂ ಮತಬ್ಯಾಂಕ್‌ಗೋಸ್ಕರ ಕಾಂಗ್ರೆಸ್ ಮುಸ್ಲಿಮರ ಓಲೈಕೆಯಲ್ಲಿ ನಿರತವಾಗಿದೆ. ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರಿಗೆ ನೀಡಿರುವ ಮೀಸಲಾತಿಯನ್ನು ಕಾಂಗ್ರೆಸ್ ಮುಖಂಡರು ಒಪ್ಪುವುದಿಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಮೀಸಲಾತಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರನ್ನು ಮತ ಬ್ಯಾಂಕ್‌ಗೋಸ್ಕರ ಮಾತ್ರ ಬಳಕೆ ಮಾಡಿಕೊಂಡಿವೆಯೇ ಹೊರತು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
ಶಾಸಕ ಎಲ್. ನಾಗೇಂದ್ರ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಆ ವರ್ಗಗಳಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದೆ. ಹೀಗಾಗಿ ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಗೆ ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮೇಯರ್ ಶಿವಕುಮಾರ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಎನ್. ಮಹೇಶ್, ನಗರಾಧ್ಯಕ್ಷ ಲಕ್ಷ್ಮಣ, ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿ ಸೋಮಸುಂದರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಹಾಗೂ ಇತರರು ಇದ್ದರರು.