ಕೆ.ಎಂ.ದೊಡ್ಡಿ: ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದು,್ದ ಜನರಿಗಾಗಿ ಜನಪರ ಯೋಜನೆಗಳು ಜಾರಿಗೆ ಬರಲಿವೆ ಎಂದು ಕಾಂಗ್ರೆಸ್ ಮುಖಂಡ ಕದಲೂರು ಉದಯ್ ತಿಳಿಸಿದರು.
ಸಮೀಪದ ಎಸ್.ಐ.ಹಾಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದೂಪುರ, ಎಸ್.ಐ.ಹಾಗಲಹಳ್ಳಿ, ಎಚ್.ಹೊಸಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಹಿತ ರಕ್ಷಣೆಗೆ ಹಲವು ಯೋಜನೆಗಳು ಜಾರಿಯಾಗಲಿವೆ ಎಂದರು.
ಗ್ಯಾರಂಟಿ ಕಾರ್ಡ್‌ನಲ್ಲಿ ತಿಳಿಸಿರುವಂತೆ ಗೃಹಿಣಿಗೆ 2000 ರೂ. ನೀಡಲಾಗುವುದು. 200ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ವ್ಯಕ್ತಿಗೆ ತಲಾ 10ಕೆ.ಜಿ.ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ನಿಜಕ್ಕೂ ವಿಪರ್ಯಾಸ. ಸ್ವಾತಂತ್ರೃ ತಂದು ಕೊಟ್ಟ ಕುಟುಂಬಕ್ಕೆ ಮಾಡಿದ ಅಪಮಾನ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ್ ಜೋಡ್ ಯಾತ್ರೆ ಮುಖಾಂತರ ರಾಹುಲ್ ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದಾರೆ. ಮಾತನಾಡುವ ಸಂದರ್ಭದಲ್ಲಿ ಕೆಲವು ಪದಗಳು ಅರಿವಿಲ್ಲದೆ ಬಂದಿರಬಹುದು. ಅದನ್ನೆ ದೊಡ್ಡದು ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ಜಿ.ಪಂ.ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಮುಖಂಡರಾದ ಕೃಷ್ಣ, ಹಾಗಲಹಳ್ಳಿ ಪುಟ್ಟೇಗೌಡ, ಮಲ್ಲೇಶ್, ಬಸವರಾಜು, ಹೊಸಹಳ್ಳಿ ಮರಿತಿಬ್ಬ, ಮಹದೇವು ಮತ್ತಿತರರು ಇದ್ದರು.