ಜಿಲ್ಲೆ

ಕಾಂಗ್ರೆಸ್ ಅಧಿಕಾರಕ್ಕೆ ತಂದರೆ ಪಶ್ಚಾತಪಡಬೇಕಾದೀತು

ಹುಬ್ಬಳ್ಳಿ : ಭರವಸೆಗಳನ್ನು ನೀಡುವಲ್ಲಿ ಸುಳ್ಳುಗಳ ಸರದಾರನಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕರ್ನಾಟಕದ ಮತದಾರರು ಪಶ್ಚಾತಾಪ ಪಡಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಈಡೇರಿಸಲು ಸಾಧ್ಯವಿರದ ಭರವಸೆಗಳನ್ನು ನೀಡುತ್ತ ಜನರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ದೂರಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ವರ್ಷಗಳು ಆಗುತ್ತ ಬಂದರೂ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಸಲು ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ನಿರುದ್ಯೋಗಿ ಯುವಕರಿಗೆ 3,500 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಒಂದು ರೂಪಾಯಿ ಸಹ ನೀಡಿಲ್ಲ ಎಂದು ವ್ಯಂಗ್ಯವಾಡಿದರು.

ಛತ್ತಿಸಘಡದಲ್ಲಿಯೂ ಕಾಂಗ್ರೆಸ್ ನೀಡಿದ್ದ ಭರವಸೆಗಳು ಈಡೇರಿಲ್ಲ. ಕಾಂಗ್ರೆಸ್ ಮುಖಂಡರು ಸುಳ್ಳು ಭರವಸೆಗಳನ್ನು ನೀಡುವಲ್ಲಿ ನಿಸ್ಸೀಮರು ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರಿಗೆ ಪರಸ್ಪರ ಜಗಳವಾಡಲು ಸಮಯ ಸಿಗುತ್ತಿಲ್ಲ. ಇನ್ನೂ, ಜನರಿಗೆ ನೀಡಿರುವ ಭರವಸೆಗಳನ್ನು ಅವರು ಯಾವಾಗ ಈಡೇರಿಸಬೇಕು ಎಂದು ಪ್ರಶ್ನಿಸಿದರು.

ರಾಜಸ್ಥಾನ ಹಾಗೂ ಛತ್ತಿಸಘಡದಲ್ಲಿ ಕಾಂಗ್ರೆಸ್ ಮುಖಂಡರ ಒಳಜಗಳ ತಾರಕಕ್ಕೇರಿದೆ. ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಜಗಳ ಗುಟ್ಟಾಗಿ ಉಳಿದಿಲ್ಲ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದಾರೆ. ಅವರು ಆಡುತ್ತಿರುವ ಅವಾಚ್ಯ ಶಬ್ಧಗಳಿಗೆ ಜನರೇ ಉತ್ತರ ನೀಡುತ್ತಾರೆ. ಕಾಮನ್​ವೆುನ್ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬೂತ್ ವಿಜಯ ಸಂಕಲ್ಪ ಯಶಸ್ವಿಯಾಗಿದ್ದು, ವಿಜಯ ಸಂಕಲ್ಪ ಅಭಿಯಾನವೂ ಯಶಸ್ಸಿನತ್ತ ಸಾಗುತ್ತಿದೆ ಎಂದು ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ಅವರು ಪಕ್ಷದ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.