ಜಿಲ್ಲೆ

ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ

Chitradurga - Desk - Pranav Kumar

ಚಿತ್ರದುರ್ಗ: ಕಾಂಗ್ರೆಸ್ ಮನಸು ಮಾಡಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪ್ರಧಾನಿಯಾಗಿ ಮಾಡಬಹುದಿತ್ತು. ಆ ಕೆಲಸ ಮಾಡಲಿಲ್ಲ. ಹೋಗಲಿ ನಿಧನ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ 6 ಅಡಿ-3 ಅಡಿ ಜಾಗ ನೀಡದೆ, ಅಗೌರವ ತೋರಿದೆ ಎಂದು ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಈ ದೇಶದ ಬೆಳಕು, ಮಹಾನ್ ಚೇತನ. ಆದರೆ, ಅವರನ್ನು ಚುನಾವಣೆಯಲ್ಲಿ ಸೋಲಿಸಿದವರಿಗೆ ಪದ್ಮವಿಭೂಷಣ ನೀಡಿದ್ದು, ಕೊನೆಯವರೆಗೂ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಂಬೇಡ್ಕರ್ ಮೃತದೇಹ ಸಾಗಿಸಲು ವಿಮಾನದ ಖರ್ಚು ಭರಿಸಲಿಲ್ಲ. ಆದರೆ, ದೆಹಲಿಯಲ್ಲಿ ನೆಹರು ಅವರಿಗೆ 52.6 ಎಕರೆ, ಇಂದಿರಾಗಾಂಧಿಗೆ 45 ಎಕರೆ, ರಾಜೀವ್‌ಗಾಂಧಿಗೆ 15 ಎಕರೆ ಸೇರಿ ಒಟ್ಟಾರೆ ನೆಹರು ಕುಟುಂಬಕ್ಕೆ ಅಂತ್ಯಸಂಸ್ಕಾರ, ಸ್ಮಾರಕ ನಿರ್ಮಿಸಲು 110 ಎಕರೆಗೂ ಹೆಚ್ಚು ಜಾಗ ನೀಡಿದ್ದೀರಿ. ಇದು ಸಂವಿಧಾನ ಶಿಲ್ಪಿಗೆ, ರಾಷ್ಟ್ರಕ್ಕೆ ಮಾಡಿದ ಅಪಮಾನವೆಂದು ಕಿಡಿಕಾರಿದರು.

ಬಿಜೆಪಿಯಿಂದ ಗೌರವ: ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಚೈತ್ಯ ಭೂಮಿ ಅಭಿವೃದ್ಧಿಗೆ 2,500 ಕೋಟಿ ರೂ., ಜನ್ಮಸ್ಥಳ ಮಧ್ಯಪ್ರದೇಶದ ಮೌಹಾದಲ್ಲಿ 2 ಲಕ್ಷ ಜನ ದರ್ಶನ ಪಡೆಯಲು ನೂರಾರು ಕೋಟಿ ರೂ., ಲಂಡನ್‌ನಲ್ಲಿ ಅವರು ಓದಿದ ಜಾಗವನ್ನು ಖರೀದಿಸಿ, ಮ್ಯೂಸಿಯಂ ಮಾಡಲಿಕ್ಕೆ 800 ಕೋಟಿ ರೂ., ಮಹಾರಾಷ್ಟ್ರದ ನಾಗಪೂರ್‌ನ ದೀಕ್ಷಾ ಭೂಮಿ ಅಭಿವೃದ್ಧಿಗೆ 280 ಕೋಟಿ ರೂ. ಖರ್ಚು ಮಾಡಿದ್ದಾರೆ. ದೆಹಲಿಯಲ್ಲಿ ಮಹಾ ಪರಿನಿರ್ವಹಣಾ ಭೂಮಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತರತ್ನ ನೀಡಿ ಗೌರವಿಸಿದ್ದಾರೆ. ಅಂಬೇಡ್ಕರ್ ಮತ್ತು ಸಂವಿಧಾನ ಬಿಜೆಪಿಯಿಂದ ಮಾತ್ರ ಉಳಿಯಲು ಸಾಧ್ಯ ಎಂದರು.