ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಿತಾವಧಿ, ಮೃತಪಟ್ಟ ನಂತರವೂ ಈ ಹಿಂದೆ ಕಾಂಗ್ರೆಸ್ಸಿಗರು ಅವಮಾನಿಸಿದ್ದನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತೇವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ದಲಿತ, ಶೋಷಿತ, ಹಿಂದುಳಿದ ಸಮುದಾಯಗಳಿಗೆ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ಸಿಗರು ಯಾವ ರೀತಿ ನಡೆಸಿಕೊಂಡಿದ್ದಾರೆಂಬ ವಸ್ತುಸ್ಥಿತಿ ತಿಳಿಸುವ ಕಾರ್ಯ ಬಿಜೆಪಿಗರು ಮಾಡಲಿದ್ದಾರೆ ಎಂದರು.
ನೆಹರು ಅವರ ಕ್ಯಾಬಿನೆಟ್‌ನಲ್ಲಿ ಅಂಬೇಡ್ಕರ್ ಬಹಳ ದಿನ ಇರಲಿಲ್ಲ. ಅವಮಾನ ಸಹಿಸದೆ, ರಾಜೀನಾಮೆ ನೀಡಿದರು. ಅವಿರೋಧ ಆಯ್ಕೆ ಬದಲು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಅಂದಿನ ಕಾಂಗ್ರೆಸ್ಸಿಗರಿಗೆ ಸಲ್ಲುತ್ತದೆ ಎಂದರು.
ಅಧಿಕಾರದಲ್ಲಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಮೃತಪಟ್ಟ ನಂತರ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ. ಆದರೆ, ನೆಹರು ಕುಟುಂಬಕ್ಕೆ ನೂರಾರು ಎಕರೆ ಕಾಂಗ್ರೆಸ್ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ತಿಳಿವಳಿಕೆ ಇಲ್ಲದ ಯುವಕರು ಮಾತ್ರ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಶಿಕ್ಷಣ ನೀಡದೆ, ದಲಿತರನ್ನು ಕತ್ತಲಿನಲ್ಲಿ ಇಟ್ಟ ಪಕ್ಷವದು. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಸುಳ್ಳು ಆಪಾದನೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ದಲಿತರನ್ನು ಎತ್ತಿ ಕಟ್ಟುವ ಹುನ್ನಾರ ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರು ಈ ದೇಶದ ಪ್ರಧಾನಿಯಾಗಬಹುದಿತ್ತು. ಆದರೆ, ಇಂದಿರಾಗಾಂಧಿ ಅವರ ಕುತಂತ್ರದಿಂದ ಕೈತಪ್ಪಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ವಿ.ಪಿ.ಸಿಂಗ್ ಅವರನ್ನು ಕಾಂಗ್ರೆಸ್ಸಿಗರು ಉಚ್ಛಾಟಿಸಿದರು ಎಂದು ಟೀಕಿಸಿದರು.
ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಸುರೇಶ್ ಸಿದ್ಧಾಪುರ, ಸಂಪತ್‌ಕುಮಾರ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ನವೀನ್ ಚಾಲುಕ್ಯ ಇತರರಿದ್ದರು.