ಜಿಲ್ಲೆ

ಕಾಂಗ್ರೆಸ್ 6, ಜೆಡಿಎಸ್-ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳ ಗೆಲುವು

ಕೆ.ಆರ್.ಸಾಗರ: ಬೆಳಗೊಳ ಕೃಷಿ ಪತ್ತಿನ ಸಹಕಾರ ಸಂಘದ 11 ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಮಂದಿ, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ 5 ಮಂದಿ ಆಯ್ಕೆಯಾದರು.

ಹೋಬಳಿಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತದಾರರಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲೂ ಸ್ಪರ್ಧೆಸಿದ್ದರು. ಮತದಾನ ಬಿರುಸಿನಿಂದ ನಡೆಯಿತು.

11 ಕ್ಷೇತ್ರಗಳ ಪೈಕಿ 10 ಮಂದಿ ಸಾಲಗಾರರ ಕ್ಷೇತ್ರ, ಸಾಲಗಾರರಲ್ಲದ ಒಬ್ಬರಿಗೆ ಒಂದು ಕ್ಷೇತ್ರದಲ್ಲಿ ಚುನಾವಣೆ ನಿಗದಿ ಮಾಡಲಾಯಿತು. ಬಿಜೆಪಿ ಹಾಗೂ ಜೆಡಿಎಸ್‌ನಿಂದ 11 ಮಂದಿ ಹಾಗೂ ಕಾಂಗ್ರೆಸ್‌ನಿಂದ 11 ಮಂದಿ ಸ್ಪರ್ಧಿಸಿದ್ದರು. ಪಕ್ಷೇತರರಾಗಿ ಇಬ್ಬರು ಸ್ಪರ್ಧಿಸಿದ್ದರು.

ಬೆಳಗೊಳ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳು, ಅವರ ಸಂಬಂಧಿಕರು, ಆಯಾ ಪಕ್ಷದ ಮುಖಂಡರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದರು.

ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ಭಾನುವಾರ ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಯಿತು.

ಸಾಮಾನ್ಯ, ಮಹಿಳಾ ಮೀಸಲು ಜೆಡಿಎಸ್ ಬೆಂಬಲಿತ ಪಿ.ಲಕ್ಷ್ಮೀ ಹಾಗೂ ಕಾಂಗ್ರೆಸ್ ಬೆಂಬಲಿತ ಸುಪ್ರಿಯಾ,ಹಿಂದುಳಿದ ವರ್ಗ-ಎ ಕಾಂಗ್ರೆಸ್ ಬೆಂಬಲಿತ ಮಜ್ಜಿಗೆಪುರ ಶ್ರೀನಿವಾಸ್, ಹಿಂದುಳಿದ ವರ್ಗ-ಬಿ ಜೆಡಿಎಸ್ ಬೆಂಬಲಿತ ಬಿ.ಎನ್.ವಾಸು, ಪರಿಶಿಷ್ಟ ಜಾತಿ ಕಾಂಗ್ರೆಸ್ ಬೆಂಬಲಿತ ಸಿದ್ದರಾಜು ಹಾಗೂ ಸಾಮಾನ್ಯ ಕ್ಷೇತ್ರಕ್ಕೆ ಜೆಡಿಎಸ್ ಬೆಂಬಲಿತರಾದ ಬಿ.ಕೆ.ಪುಟ್ಟಸ್ವಾಮಿ, ಬಿ.ಡಿ.ನಾಗೇಂದ್ರ, ಹಾಗೂ ಚೌಡೇಗೌಡ, ಸಾಮಾನ್ಯ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಜಗದೀಶ್, ಬಿ.ವಿ.ಹರೀಶ್, ವಿ.ಆರ್.ಪರಶುರಾಮ್ ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿ ವಾಸಿಂ ಪಾಷ ಘೋಷಣೆ ಮಾಡಿದರು.ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಆಯಾ ಪಕ್ಷದ ಮುಖಂಡರು, ವಿವಿಧ ಗ್ರಾಮದ ಮುಖಂಡರು ಅಭಿನಂದಿಸಿದರು.