ರಾಮನಗರ : ಅಂಬೇಡ್ಕರ್ ಪರವಾಗಿ ಮಾತನಾಡುವ ಕಾಂಗ್ರೆಸ್ ಮುಖಂಡರು, ಸಂವಿಧಾನ ಬದಲಾವಣೆಯ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು.
ರಾಮನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂವಿಧಾನಾತ್ಮಕವಾಗಿ ಧರ್ಮಾಧಾರಿತ ಮೀಸಲಾತಿಯನ್ನೂ ಕೊಡುತ್ತೇವೆ ಎನ್ನುತ್ತಾರೆ ಎಂದು ಲೇವಡಿ ಮಾಡಿದರು. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಶಿವಕುಮಾರ್ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ದಲಿತರು ಭಯದಲ್ಲಿ ಬದುಕುತ್ತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಯಾರೇ ಮಾತನಾಡಿದರೂ ಧೈರ್ಯವಾಗಿ ವಿರೋಧಿಸಿ ಎಂದು ತಿಳಿಸಿದರು.
ಮಾತೇ ಆಡದ ಸಿಎಂ!
ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ ಹನಿಟ್ರ್ಯಾಪ್, ಪೋನ್ ಟ್ರ್ಯಾಪ್ ಬಗ್ಗೆ ಚರ್ಚೆ ಆಗುತ್ತಿದೆ. ಇಲ್ಲಿಯ ತನಕ ಸರ್ಕಾರ ಇರಲೇ ಬಾರದಿತ್ತು. ಹನಿಟ್ರ್ಯಾಪ್‌ನಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೆ ಸರ್ಕಾರ ಇಷ್ಟು ಹೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು. ಆದರೆ, ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೇ ಆಡುತ್ತಿಲ್ಲ. ತನಿಖೆ ಮಾಡ್ತೀವಿ ಅನ್ನೋದು ಬಿಟ್ಟರೆ ಇನ್ನೇನು ಹೇಳಿಲ್ಲ. ತನಿಖೆ ಆದರೆ ಕಾಂಗ್ರೆಸ್‌ನವರೇ ಸಿಲುಕುತ್ತಾರೆ ಅನ್ನೋ ಭಯ. ಅದಕ್ಕಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆಗೆ ಸೂಚಿಸುತ್ತಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ರಾಜಕೀಯ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ರಾಜಕೀಯ ನಿವೃತ್ತಿ ಪಡೆಯೋದನ್ನು ಮಾಡಿ ತೋರಿಸಬೇಕು. ಅವರ ಹೇಳಿಕೆ ತಿರುಚುವುದಕ್ಕೆ ಅದು ಡ್ಯಾಂನಲ್ಲಿನ ನೀರಲ್ಲ. ಅವರು ಮಾಧ್ಯಮದಲ್ಲಿ ಕೂತು ಮಾತನಾಡಿರುವುದನ್ನು ದೇಶವೇ ನೋಡಿದೆ. ಸಂವಿಧಾನ ಬದಲಾವಣೆ ಹೇಳಿಕೆಯನ್ನು ನಾವೇನು ನಿಮ್ಮ ನಾಲಿಗೆಗೆ ಹಗ್ಗಕಟ್ಟಿ ತಿರುಚಿದ್ದೇವಾ ಎಂದು ಪ್ರಶ್ನಿಸಿದರು.
ಡಿಕೆಶಿ ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಹೊಂದಿರುವವರು. ಆದರೆ, ಅವರ ಮಾತಿನಿಂದ ರಾಜ್ಯ ರಾಜಕಾರಣದ ಪರಿಸ್ಥಿತಿ ಹದಗೆಟ್ಟಿದೆ. ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ಸರ್ಕಾರದ ಆಡಳಿತ ಇದೆ. ಇಂತಹ ಕೆಟ್ಟ ಸರ್ಕಾರವನ್ನು ನಾವು ಎಂದೂ ನೋಡಿಲ್ಲ. ಸರ್ಕಾರ ಸಂಪೂರ್ಣ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಮುಖಂಡರಾದ ಶಿವಾನಂದ, ರಾಘವೇಂದ್ರ, ರಾಜು, ಸುರೇಶ್, ಜಗನ್ನಾಥ್, ಬಿ. ನಾಗೇಶ್, ರಾಜು, ಕಾಳಯ್ಯ, ಜೆಡಿಎಸ್ ಮುಖಂಡ ಜಯಕುಮಾರ್ ಮತ್ತಿತರರು ಇದ್ದರು.
ದಲಿತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಆದರೂ, ಕಾಂಗ್ರೆಸ್‌ನ ದಲಿತ ಸಚಿವರು ಹಾಗೂ ಶಾಸಕರು ಬಾಯಿ ಬಿಡುತ್ತಿಲ್ಲ. ದಲಿತರ ಹಣ ದಲಿತರಿಗೆ ಮೀಸಲಾಗಿಡಬೇಕು. ಆದರೆ, ಗ್ಯಾರಂಟಿಗಾಗಿ ದಲಿತರ ಹಣ ಬಳಸಿಕೊಳ್ಳುತ್ತಿದೆ. - ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ