ಹಾಸನ: ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಮಾರು 20ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಈಟ್ ಇಂಡಿಯಾ ಕಂಪನಿ ರಚನೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ವ್ಯಂಗ್ಯವಾಡಿದರು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಎಚ್.ಎಂ.ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಲೋಕಸಭೆ ಪ್ರವಾಸ ಯೋಜನೆಯ ಪರಿಶೀಲನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕಾರಣ ಹಣ ಮತ್ತು ಜಾತಿಯಿಂದ ಪ್ರಜಾಪ್ರಭುತ್ವಕ್ಕೆ ಸೋಲಾಗುತ್ತಿದೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ವಿರುದ್ಧ ಸಂಘಟಿತರಾಗಿರುವ ಪ್ರಾದೇಶಿಕ ಪಕ್ಷಗಳಿಂದ ದೇಶವನ್ನು ಅಭಿವೃದ್ಥಿಪಡಿಸಲು ಸಾಧ್ಯವಿಲ್ಲ. ರಾಜ್ಯಕಾಂಗ್ರೆಸ್ ನಾಯಕರು ಈ ಹಿಂದೆ ಭ್ರಷ್ಟಾಚಾರ, ಕಮಿಷನ್ ವಿರುದ್ಧ ಮಾತನಾಡುತ್ತಿದ್ದರು ಆದರೆ ಅದೇ ಹಗರಣಗಳು ಈಗ ಕಾಂಗ್ರೆಸ್‌ನಲ್ಲಿ ಎಲ್ಲೆಡೆ ಹರಡಿಕೊಂಡಿದೆ ಎಂದು ಆರೋಪಿಸಿದರು.
ನಾನು ಬಿಜೆಪಿ ಪಕ್ಷಕ್ಕೆ ಯಾವುದೇ ಆಸೆ,ಆಕಾಂಕ್ಷೆಗಳನ್ನು ಇಟ್ಟುಕೊಂಡು ಸೇರ್ಪಡೆಯಾಗಿಲ್ಲ. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಂದಿದ್ದೇನೆ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ನಾವೆಲ್ಲರೂ ಒಮ್ಮತದಿಂದ ಕೆಲಸ ಮಾಡಿ, ರಾಜ್ಯದ 26 ಕ್ಷೇತ್ರಗಳ ಗೆಲುವಿಗೆ ಸಂಕಲ್ಪ ಮಾಡಬೇಕು ಎಂದರು.
ಲೋಕಸಭಾ ಪ್ರವಾಸ ಯೋಜನೆಯ ರಾಜ್ಯ ಸಂಯೋಜಕ ಸಚ್ಚಿದಾನಂದ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು ಆದರೆ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರೆಲ್ಲರೂ ದೇಶದ ಹಿತ ದೃಷ್ಟಿಯಿಂದ ಬಿಜೆಪಿ ಪಕ್ಷವನ್ನ ಮತ್ತೆ ಸಂಘಟಿಸುವ ಮೂಲಕ ಅತಿ ಹೆಚ್ಚು ಸ್ಥಾನ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು ಗ್ಯಾರೆಂಟಿ ಯೋಜನೆಗಳು ಅನುಷ್ಠಾನ ಮಾಡಬೇಕಗಿರುವುದ್ದರಿಂದ ಹಿನ್ನೆಲೆಯಲ್ಲಿ ಶಾಸಕರಿಗೆ ಅನುದಾನವಿಲ್ಲ ಇದರಿಂದ ಅಸಮಾಧಾನಗೊಂಡಿದ್ದಾರೆ. ಚುನಾವಣಾ ಪೂರ್ವ ಗ್ಯಾರಂಟಿಗಳ ಅನುಷ್ಠಾನಕ್ಕೆ ಷರತ್ತು ಗಳನ್ನು ವಿಧಿಸುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಎರಡು ಸ್ಥಾನವನ್ನು ಬಿಜೆಪಿಗಳಿಸಿದೆ. ಇನ್ನು ಕೆಲ ಸ್ಥಾನಗಳು ಕಡಿಮೆ ಅಂತರದಿಂದ ಸೋಲುಕಂಡಿದ್ದೇವೆ.ಈ ಬಾರಿ ಹಾಸನದಲ್ಲಿ ಲೋಕಸಭಾ ಕ್ಷೇತ್ರವನ್ನ ಗೆಲ್ಲುವ ಮೂಲಕ ವಿಜಯದ ಪತಾಕೆಯನ್ನು ಹಾರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ. ವಿಜಯಶಂಕರ್ ಮುಖಂಡರಾದ ಭಾರತಿ ಮುಗುದಂ,ಬಿಜೆಪಿ ಜಿಲ್ಲಾ ಪ್ರಭಾರಿ ನಿಜಗುರಾಜು,ದೇವರಾಜೇಗೌಡ,ಆನಂದ್, ಗುರುಮೂರ್ತಿ ಇತರರು ಇದ್ದರು.
ವಚನ ಭ್ರಷ್ಟರ ಜೊತೆ ಹೊಂದಾಣಿಕೆ ಇಲ್ಲ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಚನಭ್ರಷ್ಟರ ಜೊತೆ ಬಿಜೆಪಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ದೇಶದಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ, ಯಾವುದೇ ಕಾರಣಕ್ಕೂ ಕಾರ್ಯಕರ್ತರು ದೃತಿಗೆಡದ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿ ಹಾಗೂ ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಚಿಂತನೆ ಇಲ್ಲದ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ವಾಗ್ದಹಳ್ಳಿ ನಡೆಸಿದರು