ಹಾಸನ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಹಣ ಲೂಟಿ, ಮೂಡ ಹಗರಣ, ಅಭಿವೃದ್ಧಿ ಕೆಲಸ ನಡೆದೇ ಇರುವುದನ್ನ ಜನ ಗಮನಿಸಿದ್ದಾರೆ. ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡುವ ಸುವರ್ಣ ಅವಕಾಶ ಬಂದಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಎನ್ ಮಹೇಶ್ ಹೇಳಿದರು.
ಹಾಸನಂಬೆ ತಾಯಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳನ್ನ ಸೋಲಿಸುವ ಮೂಲಕ ಜನರು ತಿರಸ್ಕರಿಸಬೇಕು. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಹಾಗೆ ಆಗುತ್ತದೆ ಎಂದರು.
ರಾಜ್ಯದಲ್ಲಿ ಮೂರು ಕಡೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ. ಚುನಾವಣೆ ಘೋಷಣೆಯಾಗುವ ಮೊದಲು ಕೆಲವರ ಕುರ್ಚಿ ಶೇಕ್ ಆಗುತ್ತಿತ್ತು. ಚುನಾವಣೆ ಘೋಷಣೆಯಾದ ಮೇಲೆ ಅದು ನಿಂತಿದೆ. ಚುನಾವಣೆ ಮುಗಿದ ತಕ್ಷಣ ಎಲ್ಲವೂ ತಿಳಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಮಾರ್ಮಿಕವಾಗಿ ಹೇಳಿದರು.
ಮೂರು ಕಡೆ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಎರಡು ಕಡೆ ಮತ್ತು ಜೆಡಿಎಸ್ ಒಂದು ಕಡೆ ಸ್ಪರ್ಧಿಸಿದ್ದು, ಎನ್.ಡಿ.ಎ ಅಭ್ಯರ್ಥಿಗಳು ಮೂರು ಕಡೆಯೂ ಕೂಡ ಗೆಲುವು ಸಾಧಿಸಲಿದ್ದಾರೆ. ಈ ಬಗ್ಗೆ ತಾಯಿಯಲ್ಲಿ ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದರು.
ಇದು ಸಾರ್ವತ್ರಿಕ ಚುನಾವಣೆಯಲ್ಲ ಉಪಚುನಾವಣೆ ಮೂರು ಕಡೆಯಲ್ಲಿ ಕೂಡ ಕ್ಷೇತ್ರದ ಮತದಾರರು ಪ್ರಜ್ಞಾವಂತಿಕೆಯಿಂದ ಮತ ಹಾಕುತ್ತಾರೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನ ದುರಾಡಳಿತವನ್ನ ಜನ ನೋಡಿದ್ದಾರೆ. ಇದು ನಡೆಯಬಾರದು ಎಂದರೆ ಮೂರು ಕ್ಷೇತ್ರದಲ್ಲಿ ಕೂಡ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಆಗ ಸಿದ್ದರಾಮಯ್ಯ ಅಥವಾ ಬೇರೆಯವರು ಬಂದು ಯಶಸ್ವಿಯಾಗಿ ಕೆಲಸ ಮಾಡುತ್ತಾರೆ ಎಂದರು.
ನಾನು ಶಾಸಕನಾಗಿ, ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಆದರೆ ತಾಯಿಯ ದರ್ಶನ ಮಾಡುವ ಸೌಭಾಗ್ಯ ಸಿಕ್ಕಿರಲಿಲ್ಲ, ಇಂದು ದೇವಿಯ ದರ್ಶನ ಮಾಡಿದ್ದೇನೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಕೆಲವು ಅನಾಹುತ ಸೃಷ್ಟಿಯಾಗಿದೆ. ರಾಜ್ಯದ ಯಾವ ಮೂಲೆಯಲ್ಲಿಯೂ ಅನಾಹುತವಾಗದಂತೆ ಕಾಪಾಡು ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೇನೆ. ಅದೇ ರೀತಿ ಇದೊಂದು ವಿಶಿಷ್ಟವಾದ ಶಕ್ತಿಪೀಠ, ದೇವಿಯನ್ನ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಸಂದಿದೆ ಎಂದು ಹೇಳಿದರು.