ಜಿಲ್ಲೆ

ಕಸ್ತೂರಿ ರಂಗನ್ ವರದಿ ಪ್ರಕಟಿಸಿದರೆ ನ್ಯಾಯಿಕ ಹೋರಾಟ

ಶಿರಸಿ: ಕೇಂದ್ರ ಸರ್ಕಾರವು ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವಂತಹ ಡಾ.ಕಸ್ತೂರಿ ರಂಗನ್ ವರದಿ ಅಂತಿಮಗೊಳಿಸಿ ಪ್ರಕಟಿಸಿದಲ್ಲಿ ಅದರ ಬಗ್ಗೆ ನ್ಯಾಯಿಕ ಪರಿಹಾರೋಪಾಯವಾಗಿ ಸುಪ್ರೀಂ ಕೋರ್ಟ್​ನಲ್ಲಿ ಸ್ಪೆಷಲ್ ಲೀವ್ ಪಿಟಿಶನ್ ಸಲ್ಲಿಸಲು ತಯಾರಿ ಮಾಡಲಾಗಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಯನ್ನು ರಾಜ್ಯ ಒಪ್ಪುವುದಿಲ್ಲ. ರಾಜ್ಯದ 1553 ಹಳ್ಳಿಗಳ ನಿವಾಸಿಗಳ ಆತಂಕಕ್ಕೆ ಕಾರಣವಾಗಿರುವ ಡಾ.ಕಸ್ತೂರಿ ರಂಗನ್ ವರದಿ ಜಾರಿ ಸಾರಾಸಗಟಾಗಿ ತಿರಸ್ಕರಿಸುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದರು.

ಅರಣ್ಯ ಇಲಾಖೆ ಜಾರಿಗೂ ಮುನ್ನವೇ ಶೇ.90ರಷ್ಟು ಅರಣ್ಯ ಉಳಿಸಿಕೊಂಡ ಜಿಲ್ಲೆ ಉತ್ತರ ಕನ್ನಡವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆ ಸಂಬಂಧ ಅಣ್ಯಾಧಿಕಾರಿಗಳಿಂದ ಉಪದೇಶದ ಅಗತ್ಯವಿಲ್ಲ. ಅರಣ್ಯ ಉಳಿವಿನ ಜತೆ ಅಭಿವೃದ್ಧಿಯನ್ನೂ ಮಾಡಲು ಅರಣ್ಯ ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.

ದೊಡ್ಡ ದೊಡ್ಡ ವ್ಯಾಪಾರಿಗಳು, ಕೆಲ ಉತ್ಪನ್ನಗಳನ್ನು ಹೊರತರುವ ಕಂಪನಿಗಳು ಲಾಬಿ ಮಾಡಿ ಅಡಕೆಯನ್ನು ವಿಷಕಾರಕ ಎಂದೇ ಬಿಂಬಿಸಲು ಶ್ರಮಿಸುತ್ತಿವೆ. ಆದರೆ, ಸರ್ಕಾರ ಅಡಕೆ, ಅಡಕೆ ಬೆಳೆಗಾರರ ಹಿತ ಕಾಪಾಡುವ ಕಾರ್ಯ ನಿರಂತರವಾಗಿ ಮಾಡುತ್ತದೆ. ಹೀಗಾಗಿ ಬೆಳೆಗಾರರು ಚಿಂತಿಸುವ ಅಗತ್ಯವಿಲ್ಲ. ---- ಶಿವರಾಮ ಹೆಬ್ಬಾರ ಸಚಿವ