ಜಿಲ್ಲೆ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

ಮದ್ದೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಭಾನುವಾರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ವೇದಿಕೆ ಜಿಲ್ಲಾಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮಾತನಾಡಿ, ಸರ್ಕಾರ ರಾಜ್ಯದ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮ ಸರಿಯಲ್ಲ. ರೈತರನ್ನು ಉಳಿಸಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿತ್ತು. ಇದೀಗ ಅಧಿಕಾರಕ್ಕೆ ಬಂದ ಮೇಲೆ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ರೈತರು ಬೆಳೆದಿರುವ ಬೆಳೆಗಳಿಗೆ ತಕ್ಷಣ ನೀರು ನೀಡಬೇಕು. ವಾಡಿಕೆಯಷ್ಟು ಮಳೆಯಾಗದಿರುವುದರಿಂದ ಮಂಡ್ಯವನ್ನು ಬರಪೀಡಿತ ಜಿಲ್ಲೆ ಎಂದು ತಕ್ಷಣ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಗೆ ತಮಿಳುನಾಡು ಜನರನ್ನು ಓಲೈಕೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ರೈತರ ಹಿತ ಬಲಿಕೊಟ್ಟು ಕಾವೇರಿ ನೀರನ್ನು ಹರಿಸುತ್ತಿದೆ. ರಾಜ್ಯ ಎಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗುತ್ತಿದೆ. ಸದಾ ನೀರಾವರಿ ಪ್ರದೇಶವಾಗಿರುತ್ತಿದ್ದ ಜಿಲ್ಲೆಯಲ್ಲಿ ಭರದ ಛಾಯೆ ಆವರಿಸಿದೆ. ಕೂಡಲೇ ಬೆಳೆಗಳಿಗೆ ನೀರು ಹರಿಸಿ ರಾಜ್ಯದ ರೈತರನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಸೋಂಪುರ ಉಮೇಶ್, ಪಟೇಲ್ ಹರೀಶ್, ರಂಜಿತ್ ಗೌಡ, ಬೆಂಕಿ ಶ್ರೀಧರ್, ಜಗ್ಗೇಶ್, ಶಿವಪ್ಪ, ಯೋಗೇಶ್‌ಗೌಡ, ಮಲ್ಲು, ಶಿವಲಿಂಗಯ್ಯ, ಸಾಗರ್, ಮಂಗಳಮ್ಮ, ಸೀನಪ್ಪ, ಜಗದೀಶ್, ಶೇಖರಪ್ಪ, ಮನು, ಸುನಿಲ್ ಇತರರಿದ್ದರು.