ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸರು ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿರುವುದು. 
ಜಿಲ್ಲೆ

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಿ ತಾಳವಾಡಿಯ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಗುರುವಾರ ತೆರಕಣಾಂಬಿ ಸಂತೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಿದ ಒಂಬತ್ತು ಜಾನುವಾರುಗಳನ್ನು ಕಾಲ್ನಡಿಗೆಯಲ್ಲಿ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಠಾಣೆಯ ಪೊಲೀಸರು ದಾಳಿ ನಡೆಸಿ ರಕ್ಷಿಸಿದರು. ಸಾಗಣೆಯಲ್ಲಿ ತೊಡಗಿದ್ದ ಹೆಡಿಯಾಲದ ಅಕ್ಬರ್, ಶಿಂಡನಪುರದ ಕುಳ್ಳಯ್ಯ ಹಾಗೂ ಚನ್ನಪ್ಪ ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಾನುವಾರುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಗೋಶಾಲೆಗೆ ಕಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಎಸ್‌ಐ ನಂಜುಂಡಸ್ವಾಮಿ, ಸಿಬ್ಬಂದಿ ಮಹೇಶ, ರವಿ, ಮಲ್ಲುಸ್ವಾಮಿ, ರಾಘವೇಂದ್ರ ಶೆಟ್ಟಿ ಹಾಗೂ ಪ್ರದೀಪ್ ಭಾಗವಹಿಸಿದ್ದರು.