ಯಳಂದೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಸೊಸೈಟಿ ಬೀದಿಯಲ್ಲಿರುವ ಕಸಾಪ ಕಚೇರಿಯಲ್ಲಿ ಬುಧವಾರ ಬಸವ, ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವೇಶ್ವರರು ಹಾಗೂ 20ನೇ ಶತಮಾನದ ಅಂಬೇಡ್ಕರ್ ಅವರು ದೇಶ ಕಂಡ ಅಪ್ರತಿಮ ಮಾನವೀಯ ಪ್ರತಿಪಾದಕರಾಗಿದ್ದಾರೆ. ಇವರಿಬ್ಬರೂ ಅಸಮಾನತೆ, ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಒಂದು ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದರು. ಇದಕ್ಕಾಗಿ ತಮ್ಮ ಜೀವಿತಾವಧಿಯುದ್ದಕ್ಕೂ ದುಡಿದ ಮಹಾನ್ ಮಾನವತಾವಾದಿಗಳಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏಕಕಾಲಕ್ಕೆ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ಎನ್.ನಾಗೇಂದ್ರ ಮಾತನಾಡಿ, ಬಸವಣ್ಣ ಹಾಗೂ ಅಂಬೇಡ್ಕರ್ ಜಯಂತಿಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಚರಿಸಲಾಗುತ್ತಿದೆ. ಇಬ್ಬರು ಮಹನೀಯರು ದೇಶ ಕಂಡ ಅದ್ಭುತಗಳಾಗಿವೆ. ಮಹಾಮನೆ ಹಾಗೂ ಸಂಸತ್ತಿನ ಮೂಲಕ ಈ ದೇಶದ ನಾಗರಿಕರು ಹೇಗೆ ಇರಬೇಕು. ನಮ್ಮ ಅಭಿವೃದ್ಧಿ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟ ದಾರ್ಶನಿಕರಾಗಿದ್ದಾರೆ. ಇವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಬಣ್ಣಿಸಿದರು.
ಡಾ.ಪ್ರೇಮಾ ಮಾತನಾಡಿದರು. ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ಬಸವಣ್ಣ, ಲೋಕೇಶ್, ನಂಜುಂಡಮೂರ್ತಿ, ದೇವರಾಜು, ಪ್ರಭುಸ್ವಾಮಿ, ಸೋಮಣ್ಣ ಮದ್ದೂರು ಶ್ರೀಕಂಠ, ಪರಶಿವಪ್ಪ, ಗುಂಬಳ್ಳಿ ಬಸವರಾಜು, ಜಯರಾಮ್ ಕಸಾಪ ಕಾರ್ಯದರ್ಶಿ ಡಿ.ಪಿ. ಮಹೇಶ್ ಕೋಶಾಧ್ಯಕ್ಷ ಫೈರೋಜ್ ಖಾನ್, ವೈ.ಎಂ. ಭಾನುಪ್ರಕಾಶ್, ನವಾಜ್‌ಬೇಗ್ ಇದ್ದರು.