ಎನ್.ಆರ್.ಪುರದಲ್ಲಿ ಸ್ವರಚಿತ ಕವನ ವಾಚನ ಕಾರ್ಯಕ್ರಮವನ್ನು ಕಸಾಪ ಪೂವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಉದ್ಘಾಟಿಸಿದರು. ಎಚ್.ಎಸ್.ಪೂರ್ಣೇಶ್, ಕೆ.ಎಸ್.ರಾಜಕುಮಾರ್, ಕಾರ್ತಿಕ್ ಕಾರ್‌ಗದ್ದೆ, ಪ್ರಕಾಶ್ ಬನ್ನೂರು, ನಂದಿನಿ, ಜಯಮ್ಮ, ಪಿ.ಸಿ.ಮ್ಯಾಥ್ಯು ಇದ್ದರು. 
ಜಿಲ್ಲೆ

ಕಸಾಪದಿಂದ ಪ್ರತಿಭೆಗಳಿಗೆ ಪ್ರೋತ್ಸಾಹ

ಎನ್.ಆರ್.ಪುರ: ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರ ಸುಪ್ತ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ತಿಳಿಸಿದರು.

ಭಾನುವಾರ ತಾಲೂಕು ಕಸಾಪದಿಂದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉದಯಯೋನ್ಮುಖ ಕವಿಗಳ ಸ್ವರಚಿತ ಕವನ ವಾಚನ ಹಾಗೂ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಒತ್ತಡದ ಬದುಕಿನಲ್ಲಿ ಇಂಥ ಕಾರ್ಯಕ್ರಮಗಳು ಸಹಕಾರಿ ಎಂದರು.

ಪ್ರತಿ ಕವಿಯ ಚಿಂತನೆಗಳು ಕವನವಾಗಿ ಹೊರಬರುತ್ತವೆ. ಕುವೆಂಪು ಅವರಿಗೆ ಸಾಹಿತ್ಯ ರಚಿಸಲು ಮಲೆನಾಡಿನ ಪರಿಸರ, ಪ್ರಕೃತಿಯೇ ಶಕ್ತಿ ನೀಡಿದೆ. ಕುವೆಂಪು ಬರಹದಿಂದ ಮಲೆನಾಡಿನ ಪರಿಸರ, ಪ್ರಕೃತಿ ವಿಶ್ವಕ್ಕೆ ಪರಿಚಯವಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಲವಾರು ಕವಿಗಳಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರುವುದಿಲ್ಲ. ತಾಲೂಕು ಕಸಾಪ ಇದನ್ನು ಗಮನಿಸಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಉದಯೋನ್ಮುಖ ಕವಿಗಳ ಸ್ವರಚಿತ ಕವನ ವಾಚನ ಇದಕ್ಕೆ ನಿದರ್ಶನ. ಈ ಕಾರ್ಯಕ್ರಮದ ಜತೆಗೆ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸುತ್ತಿದ್ದೇವೆ ಎಂದರು.

ಕಸಾಪ ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ ಮಾತನಾಡಿ, ಕುವೆಂಪು ಸಾಹಿತ್ಯ ಯುವಜನರಿಗೆ ಆದರ್ಶವಾಗಬೇಕಾಗಿದೆ. ಆದರೆ ಯುವಜನರಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ವಿಷಾದದ ಸಂಗತಿ. ಮೊಬೈಲ್ ಸಾಹಿತ್ಯವನ್ನು ಕೊಲ್ಲುತ್ತಿದೆ. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಿದರೆ ಜ್ಞಾನ ಭಂಡಾರ ಹೆಚ್ಚಾಗುತ್ತದೆ ಎಂದರು.

ಸಾಹಿತಿ ಕೆ.ಟಿ.ವಿಜಯಕುಮಾರ್ ರಚಿಸಿದ ಭಾವಗೀತೆಗಳ ಸಂಗೀತ ಗುಚ್ಛದ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಸಂಕದಕುಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ವೇದಾವತಿ ಅವರಿಗೆ ಪ್ರದಾನ ಮಾಡಲಾಯಿತು. ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಗಾಯಕಿ ಕೆ.ಕಣಬೂರು ತೃಪ್ತಿ ಅವರನ್ನು ಸನ್ಮಾನಿಸಲಾಯಿತು. 13 ಉದಯೋನ್ಮುಖ ಕವಿಗಳು ಸ್ವರಚಿತ ಕವನ ವಾಚಿಸಿದರು.

ಡಾ. ಸುರೇಶ್‌ಕುಮಾರ್, ಡಾ. ವೀರಪ್ರಸಾದ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪ್ರಕಾಶ್ ಬನ್ನೂರು, ಕೋಶಾಧ್ಯಕ್ಷ ಕೆ.ಎಸ್.ರಾಜಕುಮಾರ್, ಸಾಹಿತಿ ಜಯಮ್ಮ, ಕಸಾಪ ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ , ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಜೇಸಿ ಕಾರ್ಯದರ್ಶಿ ಮಿಥುನ್‌ಗೌಡ ಇದ್ದರು.