ಜಿಲ್ಲೆ

ಕಸಾಪ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್‌ಜೋಶಿ ಅವರ ನಡೆಯನ್ನು ಖಂಡಿಸಿ ಬೆಂಗಳೂರು, ಮೈಸೂರು ಹಾಗೂ ಮಂಡ್ಯದಲ್ಲಿ ಪ್ರತಿರೋಧ ತೋರಿದ್ದು, ಚಾಮರಾಜನಗರದಲ್ಲೂ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಹಲವಾರು ಸಾಹಿತಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಚರ್ಚೆ ನಡೆಸಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮತ್ತು ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷರ ಮುಖ ನೋಡಿ ಎಷ್ಟು ದಿನವಾಗಿದೆಯೋ ಗೊತ್ತಿಲ್ಲ. ಕಸಾಪದಲ್ಲಿ ಹಣ ದುರುಪಯೋಗ ಆಗಿರುವುದರಿಂದ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಈ ಸಂಬಂಧ ಯಾವುದೇ ನಿರ್ಣಯಗಳನ್ನು ಕೈಗೊಂಡರೆ ನಮ್ಮ ಸಹಕಾರ ಇರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಮುಂದಾಗಬೇಕು ಎಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ನಾಗ ಮಲ್ಲಪ್ಪ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪನೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ ಗಣತೆ ಮತ್ತು ಗೌರವ ಕುಂದುವಂತಹ ಕೆಲಸ ಮಾಡಲಾಗುತ್ತಿದೆ. ರಾಜ್ಯಾಧ್ಯಕ್ಷರು ಜನರು ಹೆಚ್ಚು ಮತವನ್ನು ಪಡೆದಿರುವ ಕಾರಣಕ್ಕೆ ಎಲ್ಲರ ಅಧಿಕಾರವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲೆಯಲ್ಲೂ ಪ್ರತಿಭಟನೆ ಮತ್ತು ಸಮಾವೇಶವನ್ನು ಆಯೋಜಿಸಬೇಕಿದೆ ಎಂದರು.

ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್‌ಜೋಶಿ ಅವರು ಬೈಲವನ್ನು ತಿದ್ದುಪಡಿ ಮಾಡಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ. ಸಾಮಾಜಿಕ ಹೋರಾಟದ ಜತೆಗೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಾಧ್ಯವಿದೆಯೇ ಎಂಬುದನ್ನು ಚಿಂತಿಸಬೇಕಿದೆ ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲೇ ಬಹುದೊಡ್ಡ ಇತಿಹಾಸ ಪರಂಪರೆ ಹೊಂದಿರುವ ಸಾಹಿತ್ಯ ಪರಿಷತ್ ಅನ್ನು ಹಾಳು ಮಾಡುವಂತಹ ಪರಿಸ್ಥಿತಿಗೆ ಮುಂದಾಗಿರುವವರ ವಿರುದ್ಧ ಹೋರಾಟ ರೂಪಿಸಬೇಕಿದೆ.

ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಪ್ರಾಧ್ಯಾಪಕ ಜಿ.ಟಿ.ವೀರಪ್ಪ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಾ.ಗುರುಪ್ರಸಾದ್, ಕಲಾವಿದ ರಾಜಪ್ಪ, ವಕೀಲರಾದ ಪ್ರಸನ್ನಕುಮಾರ್, ಶಿವರಾಂ, ರವಿಕುಮಾರ್, ಜೈ ಕನ್ನಡ ಭುವನೇಶ್ವರಿ ಸಂಘದ ಅಧ್ಯಕ್ಷ ಜಿ.ಬಂಗಾರು, ಕಸಾಪ ಉಪಾಧ್ಯಕ್ಷ ರವಿಕುಮಾರ್ ಹಾಗೂ ಇತರರು ಹಾಜರಿದ್ದರು.

ನಿರಂಕುಶ ಪ್ರಭುತ್ವಕ್ಕೆ ನಾಂದಿ:

ಸುಮಾರು ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಸಾಹಿತ್ಯ ಪರಿಷತ್‌ನಲ್ಲಿ ಸಾಹಿತಿಯೇ ಅಲ್ಲದ ಮಹೇಶ್‌ಜೋಶಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ನಿರಂಕುಶ ಪ್ರಭುತ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ದೂರಿದರು. ಈ ವರೆಗೂ ಸಾಹಿತ್ಯ ಸಮ್ಮೇಳನ 2.50 ಕೋಟಿ ರೂ,ಕುರಿತು ರಾಜ್ಯಾಧ್ಯಕ್ಷರು ಲೆಕ್ಕವನ್ನು ಕೊಟ್ಟಿಲ್ಲ. ಇದೇಮೊದಲ ಬಾರಿಗೆ ರಾಜ್ಯಾಧ್ಯಕ್ಷರು ದಿನಕ್ಕೆ 5000 ರೂ, ಸಂಭಾವನೆ ಪಡೆದುಕೊಳ್ಳುತ್ತಿದ್ದು, ವಿದೇಶ ಪ್ರವಾಸ ಮಾಡಿ ಲಕ್ಷಾಂತರ ಹಣ ದುರ್ಬಳಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮಹೇಶ್ ಜೋಶಿ ವಿರುದ್ಧ ರಾಜ್ಯಾದ್ಯಂತ ಸಂಚಾರ ಮಾಡಿ ಅಭಿಪ್ರಾಯ ರೂಪಿಸಬೇಕಿದೆ. ಅವರನ್ನು ವಜಾ ಮಾಡಿ, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕತ್ತಲೆಯ ಗೂಡಾಗಿದೆ. ಹಲವಾರು ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದೇ ಜಿಲ್ಲಾ ಕಚೇರಿಗೆ ಕತ್ತಲೆಯಿಂದ ಕೂಡಿದೆ. ರಾಜ್ಯದಲ್ಲೂ ಸಾಹಿತ್ಯ ಪರಿಷತ್‌ಗೆ ಕತ್ತಲೆ ಆವರಿಸಿದ್ದು, ಅದನ್ನು ಬೆಳಕಿನೆಡೆಗೆ ಕೊಂಡೊಯ್ಯಬೇಕಿದೆ.

-ಡಾ.ಪರಮೇಶ್ವರಪ್ಪ, ಸಮಾಜಸೇವಕ, ಚಾಮರಾಜನಗರ