ಹಾಸನ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹಾಸನ ಜನಪರ ಒಕ್ಕೂಟದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಸಾಪ ಜಿಲ್ಲಾ ಅಧ್ಯಕ್ಷರು ಕೂಡ ಜನರಿಂದ ಆಯ್ಕೆಯಾದವರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ತಮ್ಮನ್ನು ಪ್ರಶ್ನೆ ಮಾಡುವ ಜಿಲ್ಲಾ ಅಧ್ಯಕ್ಷರಿಗೆ ನೋಟೀಸ್ ನೀಡುವ ಕೆಲಸ ಮಾಡಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಕೂರಿಸಿಕೊಂಡು ತಮಗೆ ಇಷ್ಟ ಬಂದಂತೆ ಪರಿಷತ್ತನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಅದೂ ಅಲ್ಲದೇ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನು ಕೊಡದೇ ದ್ವೇಷದ ಮನಸ್ಥಿತಿ ಪ್ರದರ್ಶಸುತ್ತಿದ್ದಾರೆ ಎಂದು ದೂರಿದರು.
ಮಹೇಶ್ ಜೋಷಿಯವರು ಈ ಹಿಂದೆ ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮಹೇಶ್ ಜೋಷಿ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಒಬ್ಬ ಅಪರಾಧಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಕುಳಿತಿರುವುದು ಕನ್ನಡಿಗರ ದುರಂತವೇ ಸರಿ. ಇದೀಗ ಏಕಾಏಕಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿಗೆ ಮುಂದಾಗಿದ್ದಾರೆ. ಯಾರ ಮಾತನ್ನೂ ಕೇಳದ ದುರಹಂಕಾರಿ ವರ್ತನೆಯ ಮಹೇಶ್ ಜೋಷಿಯವರು ಸರ್ವಾಧಿಕಾರಿ ವ್ಯಕ್ತಿತ್ವ ಉಳ್ಳವರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಇಂತಹವರು ಬೈಲಾ ತಿದ್ದುಪಡಿ ಮಾಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಹಾಸನ ಜನಪರ ಒಕ್ಕೂಟದ ಸಂಘ-ಸಂಸ್ಥೆಗಳು ಸೇರಿ ಹಣಕಾಸಿನ ಅವ್ಯವಹಾರ ಆರೋಪ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರುಗಳು ಹಾಗು ಪರಿಷತ್ತಿನ ಸದಸ್ಯರುಗಳ ಜತೆಗೆ ಘನತೆಯಿಂದ ನಡೆದುಕೊಳ್ಳದ ಸರ್ವಾಧಿಕಾರಿ ಧೋರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹೇಶ್ ಜೋಷಿಯವರನ್ನು ಅಮಾನತ್ತಿನಲ್ಲಿಟ್ಟು ರಾಜ್ಯ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜನಪದ ವಿದ್ವಾಂಸ ಮೇಟಿಕರೆ ಹಿರಿಯಣ್ಣ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಹಿರಿಯ ಪತ್ರಕರ್ತರಾದ ವೆಂಕಟೇಶ್, ಉದಯರವಿ, ಚಿನ್ನಸ್ವಾಮಿ, ಧರ್ಮೇಶ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಹರೀಶ್ ಕಟ್ಟೆಬೆಳಗುಲಿ, ಪಿ. ಶಾಡ್ರಾಕ್, ಟಿ.ಆರ್. ವಿಜಯಕುಮಾರ್, ಎಂ.ಜಿ. ಪೃಥ್ವಿ, ಅರವಿಂದ್, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಹರೀಶ್, ದಲಿತ ಹಿರಿಯ ಮುಖಂಡರಾದ ಕೃಷ್ಣದಾಸ್, ಅಂಬೂಗ ಮಲ್ಲೇಶ್, ಚೆಲುವನಹಳ್ಳಿ ಶೇಖರಪ್ಪ, ಇತರರು ಉಪಸ್ಥಿತರಿದ್ದರು.