ಬೀದರ್: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಹ ಮೀಸಲಾತಿ ಸೌಲಭ್ಯ ಒದಗಿಸಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ವಿಶ್ವ ಕನ್ನಡಿಗರ ಸಂಸ್ಥೆ, ವೀರ ಕನ್ನಡಿಗರ ಸೇನೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ, ಬಹುಜನ ಜಾಗೃತಿ ವೇದಿಕೆ, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಪ್ರಮುಖರು ಇಲ್ಲಿ ಡಿಸಿ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಮನವಿ ಪತ್ರ ರವಾನಿಸಿದರು.
ಪರಿಷತ್ ನ ಕೇಂದ್ರ ಸಮಿತಿ ಹಾಗೂ ಜಿಲ್ಲಾ, ತಾಲೂಕು ಘಟಕ ಅಧ್ಯಕ್ಷರು ಒಂದೇ ವರ್ಗಕ್ಕೆ ಸೇರಿದವರು ಸೀಮಿತರಾಗಿದ್ದಾರೆ. ಹೀಗಾಗಿ ಮೀಸಲಾತಿ ಅಗತ್ಯವಿದೆ ಎಂದು ಕೋರಿದ್ದಾರೆ. ಪರಿಷತ್ ನ ಅಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆಯುತ್ತದೆ. ಹೀಗಾಗಿ ಸೀಮಿತ ವರ್ಗದವರಿಗೆ ಈ ಸ್ಥಾನಗಳು ಸಿಗದಂತೆ ಎಲ್ಲರಿಗೂ ದಕ್ಕಬೇಕು. ಇದಕ್ಕಾಗಿ ಮೀಸಲು ಅಗತ್ಯ ಎಂದು ಗಮನ ಸೆಳೆದಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 1972 ರಿಂದ 2021ರವರೆಗೂ ಜಿಲ್ಲಾಧ್ಯಕ್ಷರು ಒಂದೇ ವರ್ಗಕ್ಕೆ ಸೀಮಿತವಾಗಿದ್ದಾರೆ ಎಂಬುದು ಸಾಹಿತಿ ಶಿವಕುಮಾರ ಕಟ್ಟೆ ಸಂಪಾದಿಸಿರುವ ಪುಸ್ತಕದಲ್ಲಿ ಕಾಣಬಹುದು. ಪ್ರಸಕ್ತ ವರ್ಷ ಪರಿಷತ್ ಅಧ್ಯಕ್ಷರ ಸ್ಥಾನ ಮಹಿಳೆಯರಿಗೆ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.
ವಿವಿಧ ಸಂಘಟನೆ ಪ್ರಮುಖರಾದ ಸುಬ್ಬಣ್ಣ ಕರಕನಳ್ಳಿ, ರಮೇಶ ಪಾಸ್ವಾನ್, ಸಾಯಿ ಸಿಂಧೆ, ಮಲ್ಲಿಕಾರ್ಜುನ ಮೊಳಕೇರೆ, ಮುಕೇಶ ಶಹಾಗಂಜ್, ಅಶೋಕ ವಗ್ಗೆ, ಭಗತ ಸಿಂಧೆ ಪತ್ರಕ್ಕೆ ಸಹಿ ಹಾಕಿದ್ದಾರೆ.