ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಮೂಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರೊ. ಕೋಡಿರಂಗಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಲ್ಲಿ ಚಲಾವಣೆಯಾದ ಮತಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ತಾಲೂಕಿನಲ್ಲೂ ಕೋಡಿರಂಗಪ್ಪ ಪರವಾಗಿಯೇ ಬಹುಮತ ವ್ಯಕ್ತವಾಗಿದೆ. ಇವರಿಗೆ ಎದುರಾಳಿಯಾಗಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಸ್ಪರ್ಧಿಸಿದ್ದರು.
ಪ್ರೊ. ಕೋಡಿರಂಗಪ್ಪ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಜತೆಗೆ ಸಂಪನ್ಮೂಲ ವ್ಯಕ್ತಿ ಮತ್ತು ಶಿಕ್ಷಣ ತಜ್ಞರು. ನಿರಂತರವಾಗಿ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಚುನಾವಣೆಗೆ ಮೊದಲು ಜಿಲ್ಲಾ ಕಸಾಪ ಸಮಾನ ಮನಸ್ಕರ ಬಳಗವು ಸರ್ವಾನುಮತದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ಪಟ್ಟು ಬಿಡದ ಶ್ರೀನಿವಾಸ್ ಸ್ಪರ್ಧೆಯಿಂದ ಪೈಪೋಟಿ ಉಂಟಾಯಿತು.
ಕಸಾಪ ವಲಯದಲ್ಲಿನ ಬಹುತೇಕರ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾಗುವ ಪೂರ್ಣ ವಿಶ್ವಾಸ ಇತ್ತು. ಗೆಲುವಿನಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ತರವಾದುದು. ಕಸಾಪಗೆ ಹೊಸ ಕಾಯಕಲ್ಪ, ಗಡಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸಾಹಿತ್ಯದ ಬಗೆಗಿನ ಅರಿವು, ಜಿಲ್ಲೆಯ ಸಮಗ್ರ ಇತಿಹಾಸದ ಕಿರುಪುಸ್ತಕ ಮತ್ತು ಸಂಸ್ಕೃತಿ ಕೋಶದ ಪ್ರಕಟಣೆ, ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಸೇರಿ ಕೊಟ್ಟ ಭರವಸೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಚುನಾಯಿತ ಅಧ್ಯಕ್ಷ ಕೋಡಿ ರಂಗಪ್ಪ ಹೇಳಿದರು.
ಬಿರುಸಿನ ಮತದಾನ: ಜಿಲ್ಲೆಯ ೬ ತಾಲೂಕು ಕಚೇರಿಗಳಲ್ಲಿ ಸ್ಥಾಪಿಸಿದ ಮತಗಟ್ಟೆಗಳಲ್ಲಿ ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಮತದಾರರು ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದರು. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚಿನ ಮತದಾರರು ಒಮ್ಮೆಲೆ ಆಗಮಿಸಿದ ಹಿನ್ನೆಲೆಯಲ್ಲಿ ಒತ್ತಡ ಉಂಟಾಯಿತು. ನಿಗದಿತ ಅವಧಿ ಮುಗಿಯುತ್ತಿದ್ದಂತೆ ಮತಗಟ್ಟೆಯ ಗೇಟ್ ಬಂದ್ ಮಾಡಿ, ಆ ವೇಳೆಗಾಗಲೇ ಒಳಗಿರುವವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.
ಕೊನೆ ಕ್ಷಣದವರೆಗೂ ಕಸರತ್ತು: ಸಾಮಾನ್ಯ ಚುನಾವಣೆಗಳ ಮಾದರಿಯಲ್ಲಿ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಗಟ್ಟೆ ಮುಂಭಾಗದಲ್ಲಿ ಶಾಮಿಯಾನ ಹಾಕಿಕೊಂಡು ಕುಳಿತು ಮತದಾರರನ್ನು ಸೆಳೆಯಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದರು. ಮತಗಟ್ಟೆಗೆ ಮತದಾರರು ಬರುತ್ತಿದ್ದಂತೆ ಸಮೀಪಕ್ಕೆ ಕರಪತ್ರಗಳನ್ನು ತೆಗೆದುಕೊಂಡು ಹೋಗಿ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಲ್ಲಿ ಪರಸ್ಪರ ಪೈಪೋಟಿಗಿಳಿದರು.