ಜಿಲ್ಲೆ

ಕಸಾಪ ಚುನಾವಣೆ ಘೋಷಣೆ, ಸಮ್ಮೇಳನ ಘರ್ಷಣೆ

Chikkaballapur

ಚಿಕ್ಕಬಳ್ಳಾಪುರ : ಕಸಾಪ ಪದಾಧಿಕಾರಿಗಳ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಕನ್ನಡ ಸಮ್ಮೇಳನದ ಆಯೋಜನೆಯ ವಿಚಾರವು ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದೆ.

ಹೌದು! ಹಾಲಿ ಪದಾಧಿಕಾರಿಗಳು ಕನ್ನಡ ನಾಡು ನುಡಿಯ ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕೆ ಆಕ್ಷೇಪಣೆ ಸಲ್ಲ ಎನ್ನುತ್ತಿದ್ದರೆ, ಮತ್ತೊಂದೆಡೆ ಕಸಾಪ ವಲಯದಿಂದಲೇ ಚುನಾವಣಾ ಕಾಲದಲ್ಲಿ ಪ್ರಚಾರ ಮತ್ತು ಗೊಂದಲಕ್ಕೆ ಕಾರಣವಾಗುವುದರಿಂದ ಸಮ್ಮೇಳನಗಳನ್ನು ಮುಂದೂಡಬೇಕೆಂಬ ಮಾತು ಕೇಳಿ ಬರುತ್ತಿದೆ.

ಈಗಾಗಲೇ ಕಸಾಪ ಚುನಾವಣೆಗೆ ಕೇಂದ್ರ ಚುನಾವಣಾಧಿಕಾರಿಯಾಗಿ ಜಿ.ಎಂ.ಗಂಗಾಧರಸ್ವಾಮಿ ನೇಮಕವಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿನ ತಹಸೀಲ್ದಾರ್‌ಗಳು ಜಿಲ್ಲಾ ಕಸಾಪ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು 3 ಲಕ್ಷಕ್ಕೂ ಅಧಿಕ ಮತದಾರರಿದ್ದು 400 ಕ್ಕೂ ಹೆಚ್ಚು ಅಧಿಕ ಮತಗಟ್ಟೆಗಳಲ್ಲಿ ಮೇ 9 ಕ್ಕೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾ.29 ರಿಂದ ನಾಮಪತ್ರ ಸ್ವೀಕರಿಸಲಾಗುತ್ತದೆ.

ಪ್ರಚಾರ ನಡುವೆ ಸಮ್ಮೇಳನ : ಕಸಾಪ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬೆಂಬಲಿತರೊಂದಿಗೆ ಪ್ರವಾಸ ಕೈಗೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಮುಂದಿನ ಯೋಜನೆಗಳು, ಭರವಸೆಗಳ ಈಡೇರಿಸುವಿಕೆ ಮತ್ತು ಸಂಘಟನೆ ಸೇರಿ ಹಲವು ವಿಚಾರಗಳನ್ನು ತಿಳಿಸಿ ಮತ ಯಾಚಿಸುತ್ತಿದ್ದಾರೆ. ಇದು ಕಸಾಪದಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದ್ದು ಪರಸ್ಪರ ಪ್ರತಿಸ್ಪರ್ಧಿಗಳ ಲೋಪಗಳನ್ನು ಎತ್ತಿ ತೋರಿಸುತ್ತ ಟೀಕಿಸಲಾಗುತ್ತಿದೆ. ಪ್ರತಿ ಮಾತು ಚುನಾವಣೆಗೆ ಥಳಕು ಹಾಕಿಕೊಳ್ಳುತ್ತಿದೆ. ಇದು ಸಮ್ಮೇಳನ ಆಯೋಜನೆ ವಿಚಾರವನ್ನೂ ಬಿಟ್ಟಿಲ್ಲ. ಕಸಾಪ ಸಮ್ಮೇಳನಗಳ ಮೂಲಕ ಶಕ್ತಿ ಪ್ರದರ್ಶನದ ಜತೆಗೆ ಚುನಾವಣಾ ಪ್ರಚಾರಕ್ಕೂ ಬಳಸಿಕೊಳ್ಳಲಾಗುತ್ತದೆ. ಇದು ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರಲಿದೆ. ಕನ್ನಡಪರ ಕಾರ್ಯಕ್ರಮದಲ್ಲಿ ಬಣಗಳ ಸ್ಪರ್ಧೆಯ ಸಂದೇಶ ಹರಡುವುದು ಬೆಳವಣಿಗೆಗೆ ಮಾರಕ. ಇದಕ್ಕೆ ನೈತಿಕ ಚಿಂತನೆಯಡಿ ಚುನಾವಣೆಗಳ ಬಳಿಕ ಎಲ್ಲರೂ ಸೇರಿ ಸಮ್ಮೇಳನಗಳನ್ನು ನಡೆಸಬೇಕೆಂಬ ಮಾತು ಕೇಳಿ ಬಂದಿದೆ. ಆದರೆ, ಇದನ್ನು ಸರಾಸಗಟಾಗಿ ತಳ್ಳಿ ಹಾಕಿ, ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ನಾಡು ನುಡಿಯ ಸಮ್ಮೇಳನದಲ್ಲಿ ರಾಜಕೀಯ ಬೆರೆಸುವಿಕೆ, ಗೊಂದಲ ಮೂಡಿಸುವಿಕೆ ಅನವಶ್ಯಕ ಎನ್ನಲಾಗುತ್ತಿದೆ.

ೆಬ್ರವರಿಯಲ್ಲಿ ಸಿದ್ಧತೆ : ಹಾಲಿ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಅಧಿಕಾರಾವಧಿಯ 5 ವರ್ಷಗಳಲ್ಲಿ ಜಿಲ್ಲಾ ಮಟ್ಟದ 2 ಸಮ್ಮೇಳನಗಳನ್ನು (ಗುಡಿಬಂಡೆ ಮತ್ತು ಗೌರಿಬಿದನೂರು) ಕೈಗೊಳ್ಳಲಾಗಿದೆ. ತಾಲೂಕು ಮಟ್ಟದ ಸಮ್ಮೇಳನಗಳು ಸಮರ್ಪಕವಾಗಿ ನಡೆದಿಲ್ಲ. ಕರೊನಾ ಸೋಂಕು ಮಾರ್ಗಸೂಚಿ ನಿಯಮಗಳು ಅಡ್ಡಿಯಾಗಿದ್ದು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ೆ. 26 ರಂದು ನಡೆಸಲು ಕಸಾಪ ಕಾರ್ಯಕಾರಿ ಸಮಿತಿ ಚಿಂತಿಸಿದೆ. ಈ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಇಲ್ಲಿಯವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಯಾದ ಬಳಿಕ 7 ಜಿಲ್ಲಾ ಮಟ್ಟದ ಸಮ್ಮೇಳನಗಳು ನಡೆದಿದೆ. ಇದೀಗ ಈ ಸಾಲಿನ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.