ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅವರ ವಿರುದ್ಧ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನೀಡಿರುವ ನೋಟಿಸ್‌ಗೆ ಜಿಲ್ಲೆಯ ಕಸಾಪ ಸದಸ್ಯರು, ಸಾಹಿತಿಗಳು, ಲೇಖಕರಿಂದ ಖಂಡನೆ ವ್ಯಕ್ತವಾಯಿತು.
ಪತ್ರಿಕಾಭವನದಲ್ಲಿ ಭಾನುವಾರ ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು, ಲೇಖಕರ ಸಮಾಲೋಚನಾ ಸಭೆಯಲ್ಲಿ ಕಾನೂನು ಮತ್ತು ಚಳವಳಿಗಳ ಮೂಲಕ ಮಹೇಶ್ ಜೋಶಿ ವಿರುದ್ಧ ಹೋರಾಟ ನಡೆಸಲು ನಿರ್ಣಯಿಸಲಾಯಿತು.
ಕಸಾಪ ಅಧ್ಯಕ್ಷರು ಸರ್ವಾಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಕಟ್ಟುವ ಕೆಲಸಕ್ಕಿಂತ ಒಡೆಯುವ ಕಾರ್ಯದಲ್ಲಿ ಮಗ್ನರಾಗಿರುವುದು ದುರಂತ. ಇದರಿಂದ ಕಸಾಪ ಸದಸ್ಯರ ಭಾವನೆಗೆ ನೋವಾಗಿದೆ. ಬೈಲಾ ತಿದ್ದುಪಡಿ ಮೂಲಕ ಸರ್ವಾಕಾರ ನಡೆಸುವ ಹುನ್ನಾರ ನಡೆಸಿರುವ ಮಹೇಶ್ ಜೋಶಿ ಅವರ ನಡೆಯು ಪರಿಷತ್ತಿನ ಘನತೆ, ಗೌರವ, ಧ್ಯೇಯೋದ್ದೇಶಗಳಿಗೆ ಧಕ್ಕೆ ಉಂಟುಮಾಡುತ್ತಿದೆ. ಮಹೇಶ್ ಜೋಶಿ ಅವರ ವಿರುದ್ಧವೇ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಮೊದಲು ಅವರನ್ನೇ ಸದಸ್ಯತ್ವದಿಂದ ಅಮಾನತು ಆಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಸ್ವಾತಂತ್ರ್ಯ ಹೋರಾಟಗಾರ ಪುಟ್ಟಣ್ಣ, ಕನ್ನಡ ಪುಸ್ತಕ ಪ್ರಾಕಾರ ಸದಸ್ಯೆ ಅಕ್ಷತಾ ಹುಂಚದಕಟ್ಟೆ, ಸಾಹಿತಿಗಳಾದ ತೀರ್ಥಹಳ್ಳಿ ಡಾ. ಜೆ.ಕೆ.ರಮೇಶ್, ಹೊಸನಗರ ಡಾ. ಶಾಂತರಾಮಪ್ರಭು, ಭದ್ರಾವತಿ ಜಿ.ವಿ.ಸಂಗಮೇಶ್ವರ, ಡಾ. ಎಚ್.ಟಿ.ಕೃಷ್ಣಮೂರ್ತಿ, ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ವಕೀಲ ಕೆ.ಪಿ.ಶ್ರೀಪಾಲ್, ಡಾ. ಶೇಖರ್ ಗೌಳೇರ್, ಸತ್ಯನಾರಾಯಣ, ಎಂ.ನವೀನ್‌ಕುಮಾರ್, ಮಂಜುನಾಥ ಕಾಮತ್, ಟಿ.ಕೆ.ರಮೇಶ್ ಶೆಟ್ಟಿ, ನಾಗರಕೋಡಿಗೆ ಗಣೇಶಮೂರ್ತಿ, ವಿ.ಟಿ.ಸ್ವಾಮಿ, ಮಹಾದೇವಿ ಇತರರಿದ್ದರು.