ಜಿಲ್ಲೆ

ಕಸದ ರಾಶಿಗೆ ಲೋಕಾ ಎಸ್‌ಪಿ ಕಿಡಿ

ಕಲಬುರಗಿ: ರಾಶಿ ರಾಶಿಯಾಗಿ ಬಿದ್ದಿರುವ ಕಸ, ಪ್ಲಾಸ್ಟಿಕ್ ಚೀಲಗಳು, ತೆರೆದ ಚರಂಡಿಯಲ್ಲಿ ಕಸ ಸಂಗ್ರಹ, ದುರ್ನಾತ ಬೀರುತ್ತಿರುವ ಕಸದ ಗುಡ್ಡೆ… ಹೀಗೆ ನಗರದ ಕೇಂದ್ರ ಸ್ಥಾನವಾಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಎದುರಾದ ಅಸ್ವಚ್ಛ ವಾತಾವರಣವನ್ನು ವೀಕ್ಷಿಸಿದ ಲೋಕಾಯುಕ್ತ ಪೊಲೀಸ್ ಜಾನ್ ಆಂಟೋನಿ ಪಾಲಿಕೆ ಆಡಳಿತದ ವಿರುದ್ಧ ಕಿಡಿ ಕಾರಿದರು.

ವಾರ್ಡ್ ೨೪ರ ವ್ಯಾಪ್ತಿಯ ಸೂಪರ್ ಮಾರ್ಕೆಟ್‌ನ ಮುಖ್ಯರಸ್ತೆ, ಅಂಚೇ ಇಲಾಖೆ ಕಚೇರಿ, ಸಿಟಿ ಬಸ್ ನಿಲ್ದಾಣದ ಸ್ಥಳಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಅವ್ಯವಸ್ಥೆ ಕಂಡು ದಂಗಾದರು.

ನಿತ್ಯ ಸಾವಿರಾರು ಜನರು ಓಡಾಡುವ ಇಂತಹ ಪ್ರಮುಖ ಸ್ಥಳದಲ್ಲಿ ಕಸದ ರಾಶಿ ನೋಡಿ, `ಮಳೆಗಾಲವಿದೆ. ಎಲ್ಲೆಡೆ ಕಸದ ರಾಶಿಯೇ ಸಂಗ್ರಹವಾಗಿದೆ. ಸ್ಥಳೀಯರು, ಸಾರ್ವಜನಿಕರು ಹೇಗೆ ಬದುಕಬೇಕು? ನೀರು ನಿಂತು ದುರ್ವಾಸನೆ ಬೀರಿದರೆ ಜೀವನ ಹೇಗೆ ಸಾಗಿಸಬೇಕು ಎಂದು ಸ್ಥಳದಲ್ಲಿ ಪಾಲಿಕೆ ವಲಯ ೩ರ ನೈರ್ಮಲ್ಯ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್‌ಗೆ ಪ್ರಶ್ನಿಸಿದರು.

ಇನ್ಸ್ಸ್ಪೆಕ್ಟರ್ ಆಗಿ ಏನು ಕೆಲಸ ಮಾಡ್ತಾ ಇದ್ದೀಯಾ? ಕಸ ರಾಶಿ ರಾಶಿ ಬಿದ್ದಿದೆ. ಪ್ಲಾಸ್ಟಿಕ್ ಎಲ್ಲೆಡೆ ಸಂಗ್ರಹವಾಗಿದೆ. ಎಷ್ಟು ಫೈನ್ ಹಾಕಿದ್ದಿಯಾ? ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲವೇ? ಏನು ಕೆಲಸ ಮಾಡಿದ್ದಿಯಾ? ಎಂಬುದು ಇಲ್ಲಿ ನೋಡಿದರೆ ತಿಳಿಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲ ಕಸ ತೆಗೆಸಿದ್ದೇವೆ. ಪ್ಲಾಸ್ಟಿಕ್ ಅಂಗಡಿಗಳಿಗೆ ಹೋಗಿ ಫೈನ್ ಹಾಕಲಾಗುವುದು. ಸಂಬAಧಪಟ್ಟವರಿಗೆ ನೋಟಿಸ್ ನೀಡುತ್ತೇನೆ ಎಂದು ನೈರ್ಮಲ್ಯ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಉತ್ತರಿಸಿದರು.
ಸಿಬ್ಬಂದಿ ಬಸವರಾಜ, ರಾಣೋಜಿ, ವಸಂತಕುಮಾರ ಇತರರಿದ್ದರು.

ಕಸ ತೆಗಿ ಅಂತಾ ಎಸ್‌ಪಿ ಹೇಳಬೇಕಾ?: ಕಟ್ಟಡಗಳ ಮಾಲಿಕರು ಮಾರುಕಟ್ಟೆಯ ರಸ್ತೆ ಮೇಲೆ ಕಲ್ಲು, ಸ್ಟೀಲ್, ಜಲ್ಲಿ, ಮರಳು ಹಾಕಿದ್ದಾರೆ. ಪ್ರಯಾಣಿಕರು ಬೈಕ್ ಸ್ಕಿಡ್ ಆಗಿ ಬಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದ ಎಸ್‌ಪಿ ಜಾನ್ ಆಂಟೋನಿ, ಕೆಲಸವನ್ನು ಚೆನ್ನಾಗಿ ಮಾಡಬೇಕು. ರಸ್ತೆಯಲ್ಲಿ ಕಸ, ಜಲ್ಲಿ ಕಲ್ಲು ಸಂಗ್ರಹವಾಗಿದೆ. ಅದನ್ನು ನೀಡುವುದು, ನಿರ್ವಹಣೆ ಮಾಡುವುದು ಕೆಲಸವಲ್ಲವೇ? ಕಸ ತೆಗೆಯಿರಿ ಎಂದು ಎಸ್‌ಪಿ ಹೇಳಬೇಕಾ? ಎಂದು ಪಾಲಿಕೆ ಅಧಿಕಾರಿಗೆ ಪ್ರಶ್ನಿಸಿದರು.