ಮದ್ದೂರು ತಾಲೂಕಿನ ಹೂತಗೆರೆ ಬಳಿ ಪಟ್ಟಣದ ಪುರಸಭೆಯ ಕಸವಿಲೇವಾರಿ ಘಟಕಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸ್ವತಃ ಪುರಸಭಾ ಸದಸ್ಯೆ ಪ್ರಿಯಾಂಕಅಪ್ಪುಗೌಡ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸಹಾಯ ಮಾಡುತ್ತಿರುವುದು. 
ಜಿಲ್ಲೆ

ಕಸದ ರಾಶಿಗೆ ಬೆಂಕಿ ಬಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

ಮದ್ದೂರು: ತಾಲೂಕಿನ ಹೂತಗೆರೆ ಕಸ ವಿಲೇವಾರಿ ಘಟಕದ ಬಳಿಯಿದ್ದ ಕಸದ ರಾಶಿಗೆ ಮಂಗಳವಾರ ರಾತ್ರಿ ಬೆಂಕಿ ಬಿದ್ದಿದ್ದರೂ ಪುರಸಭೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿತನ ಪ್ರದರ್ಶನ ಮಾಡಿದ್ದಾರೆಂದು ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಕಿ ಅವಘಡ ನಡೆದ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಕಿ ಹೊತ್ತಿಕೊಂಡ ಬಗ್ಗೆ ಇಲ್ಲಿನ ಸ್ಥಳಿಯ ನಿವಾಸಿಗಳು ಪುರಸಭಾ ಮುಖ್ಯಾಧಿಕಾರಿ ಅಶೋಕ್ ಹಾಗೂ ಪರಿಸರ ಇಂಜಿನಿಯರ್ ನಾಗೇಂದ್ರ ಗಾಂವ್ಕರ್ ಅವರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಅವರು ಕೇಂದ್ರ ಸ್ಥಾನದಲ್ಲಿ ಉಳಿದುಕೊಂಡು ತಕ್ಷಣ ಸ್ಥಳಕ್ಕೆ ಬಾರದೆ ಕಾಟಾಚಾರಕ್ಕೆ ಒಂದು ಅಗ್ನಿಶಾಮಕದಳದ ವಾಹನ ಕಳುಹಿಸಿ ಸುಮ್ಮಾನಾಗಿದ್ದಾರೆ. 8 ಎಕರೆ ಪ್ರದೇಶಕ್ಕೆ ಒಂದು ಅಗ್ನಿ ಶಾಮಕದಳದ ವಾಹನ ನೀರು ನಂದಿಸಲು ಸಾಧ್ಯವಾಗದೆ ಇದ್ದಾಗ, ಗ್ರಾಮಸ್ಥರು ನನಗೆ ದೂರವಾಣಿ ಕರೆ ಮಾಡಿದ್ದರು. ಆಗ ಕಷ್ಟಪಟ್ಟು ಗ್ರಾಮಸ್ಥರ ಸಹಾಯದಿಂದ ಬೇರೆ ಕಡೆಯಿಂದ ನೀರು ತಂದು ತಡರಾತ್ರಿ 12 ಗಂಟೆಯವರೆಗೂ ಬೆಂಕಿ ನಂದಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ನಾನೇ ಸ್ವತಃ ಮುಖ್ಯಾಧಿಕಾರಿ ಅಶೋಕ್ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಚ್ ಆಫ್ ಆಗಿತ್ತು. ಪರಿಸರ ಇಂಜಿನಿಯರ್ ನಾಗೇಂದ್ರ ಗಾಂವ್ಕರ್ ಅವರಿಗೆ ದೂರವಾಣಿ ಕರೆ ಮಾಡಿದರೆ ಉಡಾಫೆಯಾಗಿ ಮಾತನಾಡಿದರು ಎಂದು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

20 ದಿನಗಳ ಹಿಂದೆ ಹೂತಗೆರೆ ಕಸ ವಿಲೇವಾರಿ ಘಟಕದ ಬಳಿ ವಾಸವಿರುವ ರೈತರೊಬ್ಬರಿಗೆ ಸೇರಿದ ಹಸು ಮತ್ತು ಕರುವನ್ನು ನಾಯಿಗಳು ತಿಂದು ಹಾಕಿತ್ತು ಮತ್ತು ಬೇಸಿಗೆ ಕಾಲವಾದ ಕಾರಣ ಮರಗಳಿಗೆ ಬೆಂಕಿ ತಗುಲಿ ಅವಘಡಗಳು ಸಂಭವಿಸುತ್ತಿತ್ತು. ಆದ್ದರಿಂದ, ಇಲ್ಲಿಕಸವನ್ನು ಹಾಕದಂತೆ ಗ್ರಾಮಸ್ಥರು ಗಲಾಟೆ ಮಾಡಿದ್ದರಿಂದ ಪಟ್ಟಣದ ಎಲ್ಲ ಕಸವನ್ನು ಶಿವಪುರ ಪಂಪ ಹೌಸ್ ಬಳಿ ಹಾಕಲಾಗುತ್ತಿತ್ತು. ಬುಧವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಲ್ಲಿಯೂ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಪೌರಕಾರ್ಮಿಕರಿಗೆ ಏನಾದರೂ ಅನಾಹುತ ಸಂಭವಿಸಿದ್ದರೆ ಇದಕ್ಕೆ ಯಾರು ಹೊಣೆ ಎಂದ ಅವರು, ದಯಮಾಡಿ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಪ್ರಿಯಾಂಕ ಅಪ್ಪುಗೌಡ ಆಗ್ರಹಿಸಿದ್ದಾರೆ.