ಜಿಲ್ಲೆ

ಕಸದ ಬುಟ್ಟಿಗೆ ಪ್ರಸ್ತಾವನೆಗಳ ಪಟ್ಟಿ!

ಯಾದಗಿರಿ: ಗಿರಿ ಜಿಲ್ಲೆ ಯಾದಗಿರಿಗೆ ಯಾರ ಮತ್ತು ಯಾವ ಶಾಪ ಇದೆಯೋ ಭಗವಂತನೇ ಬಲ್ಲ. ಅಭಿವೃದ್ಧಿ ವಿಷಯದಲ್ಲಿ ಆಳುವ ಸರ್ಕಾರಗಳು ಎಷ್ಟೊಂದು ಕಡೆಗಣಿಸುತ್ತಿವೆ ಎಂದರೆ ಪಕ್ಕದ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದರೂ ಹಿಂದುಳಿದ ಈ ಜಿಲ್ಲೆ ಪ್ರಗತಿಗೆ ಪೂರಕವಾಗಿ ಸಲ್ಲಿಸಿದ ಪ್ರಸ್ತಾವನೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗದೆ ಕಸದ ಬುಟ್ಟಿಗೆ ಎಸೆದಂತಾಗಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರಗಿಗೆ ಸಿಂಹಪಾಲು ಅನುದಾನ ಲಭಿಸಿದರೆ, ಯಾದಗಿರಿಗೆ ಮಾತ್ರ ಚೆಂಬು ನೀರು ಕೊಟ್ಟಂತಿದೆ. ಸಂಪುಟ ಸಭೆ ಕೇವಲ ಕಲಬುರಗಿ ಜಿಲ್ಲೆಗೆ ಅನುದಾನ ಮಂಜೂರು ಮಾಡಲು ನಡೆದಿದೆಯೇ ಎಂಬ ಪ್ರಶ್ನೆ ಯಾದಗಿರಿ ಸೇರಿ ಅನ್ಯ ಜಿಲ್ಲೆ ಪ್ರಜ್ಞಾವಂತರಿAದ ಕೇಳಿ ಬರುತ್ತಿದೆ.

ಸಿಂಹಪಾಲು ಅನುದಾನ ಪಡೆದಿದ್ದರೂ ಕಲಬುರಗಿ ಜಿಲ್ಲೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರೇ ಸಭೆ ಮತ್ತು ಅನುದಾನ ನೀಡಿಕೆ ತೃಪ್ತಿ ತಂದಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 1.5 ಕೋಟಿ ರೂ. ಖರ್ಚು ಮಾಡಿ ಮೂರೂವರೆ ತಾಸು ನಡೆಸಿದ ಸಭೆಯಲ್ಲಿ ತಮ್ಮ ಗಿರಿ ಜಿಲ್ಲೆ ಕಡೆಗಣೆಸಿದ್ದರ ಬಗ್ಗೆ ಯಾವೊಬ್ಬ ಶಾಸಕ ತುಟಿ ಬಿಚ್ಚದಿರುವುದು ಸಹ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಏನೇನು ಪ್ರಸ್ತಾವನೆ?: ಯಾದಗಿರಿ ತಾಲೂಕಿನ ಹಿರೇ ಆನೂರು ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಿಸಿಬಿಗೆ ಮೆಕಾನಿಕಲ್ ವರ್ಕ್ ಗೇಟ್ ಕಾಮಗಾರಿಗೆ 80 ಕೋಟಿ ರೂ., ಗುರುಮಠಕಲ್ ತಾಲೂಕಿನ ಛಲೇರಿ ಹತ್ತಿರದ ನಂದೇಪಲ್ಲಿ ನಾಲಾಕ್ಕೆ ಅಡ್ಡಲಾಗಿ ಬಿಸಿಬಿ ಕಾಮಗಾರಿಗೆ 35 ಕೋಟಿ, ಹೊಸ ಮೂರು ತಾಲೂಕುಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅನುದಾನ ಮತ್ತು ಕಡೆಚೂರು -ಬಾಡಿಯಾಳ ಕೈಗಾರಿಕಾ ಪ್ರದೇಶದ 3000 ಎಕರೆ ಭೂಮಿಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಗುಳೆ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿತ್ತು. ಗುರುಮಠಕಲ್‌ನಲ್ಲಿ 100 ಹಾಸಿಗೆ ಆಸ್ಪತ್ರೆ, ಜಿಲ್ಲೆ ಜನರಿಗೆ ಶುದ್ಧ ನೀರು ಸರಬರಾಜಿಗೆ ಆರ್‌ಓ ಪ್ಲಾಂಟ್‌ಗಳ ದುರಸ್ತಿಗೆ ಅನುದಾನ, ಜಿಲ್ಲೆಯಲ್ಲಿ ಹರಿದು ಹೋಗುವ ಕೃಷ್ಣಾ ಮತ್ತು ಭೀಮಾ ನದಿಗಳಿಂದ ಸಮರ್ಪಕ ನೀರು ಬಳಕೆಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಕೇಳಿಕೊಂಡರೂ ಎಲ್ಲವೂ ಕಸದ ಬುಟ್ಟಿಗೆ ಹಾಕಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತೆ ಇಡೀ ಜಿಲ್ಲೆಗೆ ಕೇವಲ 750 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲೂ ಒಂದೇ ತಾಲೂಕಿಗೆ ಸಿಂಹಪಾಲು ಸಿಕ್ಕಿದೆ. ಜಿಲ್ಲಾ ಕೇಂದ್ರ ಯಾದಗಿರಿ ಅಭಿವೃದ್ಧಿಗೆ ಹೊಸ ಯೋಜನೆ ಅಥವಾ ಅನುದಾನವಾಗಲಿ ಘೋಷಿಸಿಲ್ಲ. ಬದಲಿಗೆ ಹುಸಣಗಿ, ವಡರೇಗಾ ಮತ್ತು ಗುರುಮಠಕಲ್ ತಾಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಹಂತ-ಹAತವಾಗಿ ಅನುದಾನ ನೀಡುವುದಾಗಿ ಹೇಳಿದ್ದೆ ಕ್ಯಾಬಿನೆಟ್ ಮೀಟಿಂಗ್‌ನ ಬಹುದೊಡ್ಡ ಕೊಡುಗೆ ಎನ್ನಬಹುದು.