ಮಂಜುನಾಥ ಎಸ್.ಸಿ.ಹೊಸಕೋಟೆ
ನಗರದಲ್ಲಿ ಏಳೆಂಟು ವರ್ಷಗಳಿಂದ ಕಸ ಸಮಸ್ಯೆ ದಿನೇದಿನೆ ಉಲ್ಬಣಗೊಳ್ಳುತ್ತಿದೆ. ಕೆಲ ಭಾಗಗಳಲ್ಲಿ ಕಂಡುಬರುತ್ತಿದ್ದ ಕಸದ ರಾಶಿ ಈಗ ನಗರದ ಎಲ್ಲ ರಸ್ತೆಗಳಲ್ಲೂ ರಾರಾಜಿಸುತ್ತಿದೆ. ಹಾಗೆಯೇ ನಗರ ಹೊರವಲಯದ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ತ್ಯಾಜ್ಯ ವಿಲೇ ಮಾಡಿದ್ದು, ವಾತಾವರಣ ಗಬ್ಬು ನಾರುತ್ತಿದೆ.
ನಗರದಲ್ಲಿ ಪ್ರತಿ ದಿನ ಸುಮಾರು 25 ರಿಂದ 30 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಒಣ ಹಾಗೂ ಹಸಿ ಕಸವಾಗಿ ಬೇರ್ಪಡಿಸಿ, ಹಸಿ ಕಸವನ್ನು ರೈತರಿಗೆ ಹಾಗೂ ಒಣಕಸವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಪ್ರತಿದಿನ ನಗರಸಭೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳು, ನಗರದ ಪ್ರತಿ ರಸ್ತೆಗಳಲ್ಲಿ ಕಸ ಹೇಗೆ ಬರುತ್ತದೆ ಎಂದು ತಿಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರತಿ ದಿನ 40 ರಿಂದ 50 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಸಮರ್ಪಕ ವಿಲೇವಾರಿ ಮಾಡದ ಪರಿಣಾಮ ಹೊಸಕೋಟೆ ಕಸದ ಕೋಟೆಯಂತಾಗಿದೆ.
ಬೀದಿ ನಾಯಿಗಳ ಹಾವಳಿ: ನಗರದ ಗಲ್ಲಿ ಗಲ್ಲಿಗಳಲ್ಲಿ ಮಾಂಸ ಮಾರಾಟದ ಅಂಗಡಿಗಳು ಶುರುವಾಗಿದ್ದು, ಈವರೆಗೆ ಸಾಕಷ್ಟು ಮಂದಿ ನಗರಸಭೆಯಿಂದ ಅನುಮತಿ ಪಡೆದಿಲ್ಲ. ಜತೆಗೆ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಬದಿ ಬಿಸಾಡುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಕಸ ತುಂಬಿರುತ್ತಿದೆ. ಮಾಂಸ ತ್ಯಾಜ್ಯ ತಿನ್ನಲು ಬರುವ ಬೀದಿ ನಾಯಿಗಳ ಗುಂಪು ಸಾರ್ವಜನಿಕರ ಮೇಲೆರಗಿ ಗಾಯಗೊಳಿಸುವ ಜತೆಗೆ ವಾಹನ ಸವಾರರ ಮೇಲೂ ದಾಳಿ ಮಾಡಿವೆ. ವಾಹನಗಳಿಗೆ ಅಡ್ಡವಾಗಿ ಬಂದು ಅಪಘಾತಕ್ಕೂ ಕಾರಣವಾಗುತ್ತಿವೆ.
31 ವಾರ್ಡ್‌ಗಳಿಗೆ 15 ಆಟೋ ಬಳಕೆ: ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಕಸ ಸಂಗ್ರಹ ಮಾಡಲು 15 ಆಟೋ ಟಿಪ್ಪರ್ ಬಳಸಲಾಗುತ್ತಿದೆ. ಮುಂಜಾನೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮುಂಜಾನೆ ಕೆಲಸಕ್ಕೆ ಹೋಗುವ ಬಹುತೇಕರು 9 ಗಂಟೆಯಾದರೂ ಕಸ ಸಂಗ್ರಹ ವಾಹನ ಬಾರದಿದ್ದಲ್ಲಿ ರಸ್ತೆ ಬದಿ ಕಸ ಎಸೆಯುವುದು ಸಾಮಾನ್ಯವಾಗಿದೆ.
ಕಸ ಘಟಕ ನಿರ್ಮಾಣಕ್ಕೆ ತೊಡಕು: ನಗರಸಭೆಯ ಕಸ ವಿಂಗಡಣೆಗೆ 7 ವರ್ಷದ ಹಿಂದೆಯೇ ತಾಲೂಕಿನ ಕಲ್ಲಹಳ್ಳಿಯಲ್ಲಿ ಜಾಗ ಗುರುತಿಸಲಾಗಿದ್ದು, ಕಸ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಆದರೆ ಕಲ್ಲಹಳ್ಳಿ ಜನತೆಯ ವಿರೋಧದಿಂದಾಗಿ ಕೇವಲ ಸರ್ವೇ ಮಾಡಿಸಲಾಗಿದೆ. ಘಟಕ ನಿರ್ಮಾಣ ಸಾಧ್ಯವಾಗಿಲ್ಲ.
ಪ್ರಭಾವಿಗಳ ಕೈಯಲ್ಲಿ ಆಡಳಿತ: ನಗರಸಭೆಯಲ್ಲಿ ಪ್ರಭಾವಿಗಳೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. 8 ತಿಂಗಳಿನಿಂದ ಸದಸ್ಯರ ಸಭೆ ಕರೆದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರಿಸುವವರಾರೂ ಇಲ್ಲ. ನಗರದ ಜ್ವಲಂತ ಸಮಸ್ಯೆ ಚರ್ಚಿಸಿ, ಪರಿಹಾರ ಕಲ್ಪಿಸಲು ಕನಿಷ್ಠ 2 ಅಥವಾ 3 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಆದರೆ ಸಭೆ ನಡೆಸದೆ ಆಡಳಿತ ನಡೆಸಲಾಗುತ್ತಿದೆ. ಕಸದ ಸಮಸ್ಯೆ ಬಗ್ಗೆ ಮೊದಲ ಸಭೆಯಲ್ಲಿ ಚರ್ಚಿಸಲಾಗಿತ್ತಾದರೂ ಪರಿಹಾರ ದೊರಕಿಲ್ಲ. ಪ್ರತಿ ವಾರ್ಡ್‌ಗೆ ಕಸ ಸಂಗ್ರಹಕ್ಕೆ ಪ್ರತ್ಯೇಕ ಆಟೋ ನೀಡುವ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಗರಸಭೆ ಸದಸ್ಯ ಕೇಶವಮೂರ್ತಿ ತಿಳಿಸಿದರು.
ಕಸದ ವಿಚಾರದಲ್ಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆರೋಪ ಪ್ರತ್ಯಾರೋಪ ಮಾಡುವ ಮೂಲಕ ರಾಜಕೀಯ ಮಾಡುವ ಬದಲು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲು ಮುಂದಾಗಬೇಕು.
ಎಂ.ಆರ್. ಉಮೇಶ್ ಸೂಲಿಬೆಲೆ
ತಾಲೂಕಿನ 16 ಗ್ರಾಪಂ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸಂಗ್ರಹವಾಗುವ ಕಸವನ್ನು ದಿನಕ್ಕೊಂದು ಘಟಕದಲ್ಲಿ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸಿ ತೀರ್ಮಾನ ಕೈಗೊಂಡರೆ ಸಮಸ್ಯೆ ಪರಿಹಾರವಾಗುವ ಜತೆಗೆ ಗ್ರಾಪಂ ಆದಾಯ ಹೆಚ್ಚಿಸಬಹುದಾಗಿದೆ. ಮಂಜುನಾಥ್ ಹೊಸಕೋಟೆ ನಿವಾಸಿ