ಜಿಲ್ಲೆ

ಕಸದ ಕೊಂಪೆಯಾದ ಹುಬ್ಬಳ್ಳಿ ರಸ್ತೆಗಳು, ಸಮರ್ಪಕ ವಿಲೇವಾರಿ ಇಲ್ಲದೆ ಸಂಚಾರ ಸಮಸ್ಯೆ, ತ್ಯಾಜ್ಯದ ವಾಹನ ಬಂದರೂ ಇದೇ ಕಥೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನಗರದಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಎಲ್ಲೆಂದರಲ್ಲಿ ರಸ್ತೆ ಬದಿ ಕಸದ ರಾಶಿಗಳು ಸ್ಮಾರ್ಟ್ ಸಿಟಿ ಸುಧಾರಣೆಯನ್ನು ಅಣಕಿಸುತ್ತಿವೆ.

ಕಾಂಕ್ರಿಟ್ ರಸ್ತೆ, ಡಾಂಬರ್ ರಸ್ತೆಗಳನ್ನು ನಗರದ ವಿವಿಧೆಡೆ ನಿರ್ಮಾಣ ಮಾಡಲಾಗುತ್ತಿದೆ. ಕೆಲವೆಡೆ ಈಗಾಗಲೇ ರಸ್ತೆ ನಿರ್ವಣವಾಗಿವೆ. ಆದರೆ, ಹೀಗೆ ನಿರ್ವಣವಾಗಿರುವ ರಸ್ತೆಗಳ ಅಕ್ಕಪಕ್ಕ ಅಲ್ಲಲ್ಲಿ ಕಸ ಚೆಲ್ಲಲಾಗುತ್ತಿದೆ.

ರಸ್ತೆ ಬದಿ ಯಾರಾದರೂ ಒಬ್ಬರು ಕಸ ಚೆಲ್ಲಿದರೆ ಮುಗಿಯಿತು. ಅದನ್ನು ನೋಡಿದ ಮತ್ತೊಬ್ಬರು ಅದೇ ಜಾಗದಲ್ಲಿ ತಂದು ಕಸ ಎಸೆಯುತ್ತಿದ್ದಾರೆ. ಹೀಗೆ ಎಸೆದ ಕಸವು ಒಂದೇ ದಿನದಲ್ಲಿ ರಾಶಿಯಾಗಿ ನಿಲ್ಲುತ್ತಿದೆ. ಇಂತಹ ಕಸದ ರಾಶಿಗಳನ್ನು ದನಕರು, ಹಂದಿಗಳು ಕೆದರಿ ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಿವೆ. ರಸ್ತೆಯೆಲ್ಲ ಗಲೀಜಾಗುತ್ತಿವೆ. ಸಂಚಾರಕ್ಕೂ ಸಂಚಕಾರ ತರುತ್ತಿವೆ.

ಇಕ್ಕಟ್ಟಾದ ರಸ್ತೆ:

ನಗರದ ಬಹಳಷ್ಟು ರಸ್ತೆಗಳಲ್ಲಿ ಕಸ ಚೆಲ್ಲುತ್ತಿರುವುದರಿಂದ ಅವು ಇಕ್ಕಟ್ಟಾಗಿ ಪರಿಣಮಿಸಿವೆ. ಎರಡೂ ಬದಿಯಲ್ಲಿ ಏಕಕಾಲಕ್ಕೆ ವಾಹನಗಳು ಬಂದರೆ ಕಸದ ರಾಶಿ ಇರುವಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ವಿಶಾಲವಾದ ರಸ್ತೆಗಳಿದ್ದರೂ ವಾಹನ ಸಂಚಾರಕ್ಕೆ ಅವು ಕಿರಿಕಿರಿ ಮಾಡುತ್ತಿವೆ.

ಇಲ್ಲಿಯ ತುಳಜಾಭವಾನಿ ದೇವಸ್ಥಾನ ಬಳಿಯ ನ್ಯೂ ಮೇದಾರ ಓಣಿಯ ನಾಲಾ ಬಳಿ ಕಸ ತಂದು ಹಾಕಲಾಗುತ್ತಿದೆ. ಕಸದ ರಾಶಿ ಸಂಜೆಯಾಗುತ್ತಲೇ ದೊಡ್ಡದಾಗುತ್ತದೆ. ಕಸದ ನಿರ್ವಹಣೆ ಸರಿಯಾಗಿ ಆಗದೇ ಇಲ್ಲಿ ಓಡಾಡುವವರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಕಿಮ್್ಸ ಹಿಂದಿನ ಗೇಟ್ ಬಳಿ ಅಂದರೆ ನ್ಯೂ ಕಾಟನ್ ಮಾರ್ಕೆಟ್​ನಿಂದ ಹೋಗುವ ರಸ್ತೆಯಲ್ಲೂ ಕಸದ ರಾಶಿಗಳು ಕಾಣುತ್ತವೆ. ಹಂದಿಗಳ ಉಪಟಳವೂ ಜಾಸ್ತಿ ಇದೆ.

ರಸ್ತೆಯಲ್ಲಿ ಕಸ ಹಾಕುವ ಬ್ಲಾ್ಯಕ್ ಸ್ಪಾಟ್​ಗಳನ್ನು ಗುರುತು ಮಾಡಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಇಂತಹ ಸ್ಥಳಗಳನ್ನು ಬರೀ ಗುರುತಿಸಿದರೆ ಮುಗಿಯಿತೇ? ಅಲ್ಲಿ ಕಸ ಹಾಕದಂತೆ ಎಚ್ಚರಿಕೆ ವಹಿಸುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ನಗರದ ಬಹಳಷ್ಟು ಕಡೆಗಳಲ್ಲಿ ಇಂತಹ ಅವ್ಯವಸ್ಥೆ ಕಂಡು ಬರುತ್ತದೆ. ಮನೆಮನೆಗೆ ಕಸದ ಗಾಡಿ ಬಂದರೂ ಹೀಗೆ ಅಲ್ಲಲ್ಲಿ ಕಸ ಚೆಲ್ಲುವುದು ಏಕೆ? ನಾಗರಿಕರಿಗೂ ಸ್ವಚ್ಛತೆ ಬಗ್ಗೆ ಕಾಳಜಿ ಇರಬೇಕಲ್ಲವೇ? ಈ ಬಗ್ಗೆ ಜಾಗೃತಿ ಮೂಡುವುದು ಯಾವಾಗ?