ಹಾಸನ: ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಆ.24ರ ಗುರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಎಂ.ಆರ್. ವೇಣು ಎಚ್ಚರಿಕೆ ನೀಡಿದರು.
ತ್ಯಾಜ್ಯ ವಿಲೇವಾರಿಗಾಗಿ ಕಾಯ್ದಿರಿಸಿರುವ ಜಾಗದ ಪಕ್ಕದಲ್ಲಿ ಗ್ರಾಮದ ಜನರು ಕುಡಿಯುವ ನೀರು ಸರಬರಾಜು ಆಗುವ ಕೊಳವೆ ಬಾವಿ, ಕೆರೆ, ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಗ್ರಾಮದ ಸುಮಾರು 110 ಮನೆಗಳು ಇವೆ. ಈ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬಾರದೆಂದು ಆರಂಭದಿಂದಲೂ ಗ್ರಾಮಸ್ಥರು ವಿರೋಧಿಸುತ್ತಾ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವಿಚಾರವಾಗಿ ನಾವು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆವು. ಅದರಂತೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಜತೆಗೆ ಬದಲಿ ಸ್ಥಳಗಳನ್ನು ಗುರುತಿಸಿ ಪಹಣಿ ತಂದುಕೊಂಡುವಂತೆ ತಿಳಿಸಿದ್ದರು. ಆದರೆ ಭರವಸೆ ನೀಡಿದ್ದ ಅದೇ ಜಿಲ್ಲಾಧಿಕಾರಿ ಈಗ ಉದ್ದೇಶಿತ ಜಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸಲು ಆದೇಶ ನೀಡಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗುರುವಾರದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡಲಿದ್ದೇವೆ. ಈ ಹೋರಾಟವನ್ನು ಜಿಲ್ಲೆ ಮತ್ತು ರಾಜ್ಯದ ಎಲ್ಲಾ ಜನಪರ ಸಂಘಟನೆಗಳು, ದಲಿತ, ಪ್ರಗತಿಪರ, ಸಂವಿಧಾನಪರ ಸಂಘಟನೆಗಳು ಹಾಗೂ ಸರ್ವಪಕ್ಷಗಳ ಮುಖಂಡರು, ಸಾಮಾಜಿಕ ಹೋರಾಟಗಾರರು ಬೆಂಬಲಿಸಿ, ಭಾಗವಹಿಸಬೇಕು ಎಂದು ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಳಲಿ ಗ್ರಾಮಸ್ಥರಾದ ಶಿವಣ್ಣ, ಗ್ರಾಪಂ ಉಪಾಧ್ಯಕ್ಷ ಎಂ.ಸಿ. ಯೋಗೇಶ್, ಗೋಪಾಲ್, ಕೃಷ್ಣ ಪ್ರಸಾದ್ ಇತರರು ಉಪಸ್ಥಿತರಿದ್ದರು.