ಜಿಲ್ಲೆ

ಕಸ ತೆರವಿಗೆ ಕೂಡಿಬರದ ಘಳಿಗೆ; ಟೆರ‌್ರಾರ್ಮಾ ತ್ಯಾಜ್ಯ ಘಟಕದಲ್ಲಿ ಕೊಳೆಯುತ್ತಿದೆ ರಾಶಿಗಟ್ಟಲೆ ಕಸ; ಹುಸಿಯಾದ ಸರ್ಕಾರದ ಭರವಸೆ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಮತ್ತು ಸಾಸಲು ಹೋಬಳಿ ವ್ಯಾಪ್ತಿಯಲ್ಲಿ 2016ರಲ್ಲಿ ಮುಚ್ಚಲಾದ ಟೆರ‌್ರಾರ್ಮಾ ಕಸ ಸಂಸ್ಕರಣಾ ಘಟಕದಲ್ಲಿ ರಾಶಿಗಟ್ಟಲೆ ಕಸ ಕೊಳೆತು ಗಬ್ಬನಾರುತ್ತಿದೆ.

ಘಟಕದಲ್ಲಿ ಕಸವನ್ನು ತಕ್ಷಣವೇ ವಿಲೇವಾರಿಗೆ ಕ್ರಮಕೈಗೊಳ್ಳುವುದಾಗಿ ಸರ್ಕಾರ ನೀಡಿದ್ದ ಭರವಸೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಟೆರ‌್ರಾರ್ಮಾ ಪುನರಾರಂಭದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಕಸ ಘಟಕ ಪುನರಾರಂಭ ವಿರೋಧಿಸಿ ಸರಣಿ ಪ್ರತಿಭಟನಾಧರಣಿ ನಡೆಸಿದ್ದರು.

ಸಚಿವರಾದಿಯಾಗಿ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಸಿಎಂ ಕಸ ಘಟಕ ಮರು ಆರಂಭಕ್ಕೆ ಕೆಂಪು ನಿಶಾನೆ ತೋರಿಸಿದ್ದರು. ಜತೆಗೆ ಕಸ ಘಟಕದಲ್ಲಿ ಕೊಳೆಯುತ್ತಿರುವ ತ್ಯಾಜ್ಯವನ್ನು ತಕ್ಷಣವೇ ವಿಲೇವಾರಿ ಮಾಡುವ ಆದೇಶ ರವಾನಿಸಿದ್ದರು. ಆದರೆ ಇದುವರೆಗೆ ಅಂಥ ಯಾವುದೇ ಪ್ರಕ್ರಿಯೆ ಆರಂಭವಾಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆ ನೀರಿನೊಂದಿಗೆ ಕೊಳೆಯುತ್ತಿದೆ: ಮುಂಗಾರು ಆರಂಭವಾಗಿದ್ದು, ಘಟಕದಲ್ಲಿ ರಾಶಿಗಟ್ಟಲೆ ಕಸ ಮಳೆನೀರಿನೊಂದಿಗೆ ಬೆರೆಯುತ್ತಿರುವುದರಿಂದ ಕಸ ಕೊಳೆತು ನಾರುತ್ತಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಕಸದ ವಾಸನೆ ಹರಡುತ್ತಿದ್ದು, ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆಪಮಾತ್ರಕ್ಕೆ ಕೆಲವೊಂದು ಕಡೆ ಕಸದ ಮೇಲೆ ಮಣ್ಣು ಸುರಿಯಲಾಗಿದೆ. ಆದರೆ ಭಾಗಶಃ ಕಸ ತೆರೆದ ಪ್ರದೇಶದಲ್ಲಿ ರಾಶಿಯಾಗಿದ್ದು, ಕಸದ ವಿಷಕಾರಿ ಲಿಚೆಟ್ ಹರಿದು ಅಂತರ್ಜಲ ಸೇರುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು: ಘಟಕದಿಂದಾಗಿ ದೊಡ್ಡಬೆಳವಂಗಲ, ಸಾಸಲು, ಆರೂಢಿ, ಹುಲಿಕುಂಟೆ, ಸಕ್ಕರೆಗೊಲ್ಲಹಳ್ಳಿ, ಭಕ್ತರಹಳ್ಳಿ ಗ್ರಾಪಂಗಳು ಸಮಸ್ಯೆ ಎದುರಿಸುತ್ತಿವೆ. ಅದರಲ್ಲೂ ಚಿಕ್ಕಮಂಕಲಾಳ, ದೊಡ್ಡಮಂಕಲಾಳ, ತಣ್ಣಿರನಹಳ್ಳಿ, ಕಾಡತಿಪ್ಪೂರು, ಬೊಮ್ಮನಹಳ್ಳಿ, ಭೋವಿಪಾಳ್ಯ ಗುಂಡ್ಲಹಳ್ಳಿ ಗ್ರಾಮಗಳಿಗೆ ಘಟಕ ಕಂಟಕವಾಗಿ ಪರಿಣಮಿಸಿದೆ.

2ನೇ ಸುತ್ತಿನ ಹೋರಾಟ: ಜನರ ಹೋರಾಟದ ಲವಾಗಿ 2016ರ ಮಾರ್ಚ್ ಅಂತ್ಯಕ್ಕೆ ದೊಡ್ಡಬೆಳವಂಗಲ ಭಾಗದ ಗುಂಡ್ಲಹಳ್ಳಿಯ ಟೆರ‌್ರಾರ್ಮಾ ಬಂದ್ ಮಾಡಲಾಯಿತು. ಮತ್ತೆ ತಾಲೂಕಿನಲ್ಲಿ ಘಟಕ ಪುನರಾರಂಭದ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ 2020ರ ಮಾರ್ಚ್ 6ರ ನಂತರದಲ್ಲಿ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿತ್ತು.

ಇಲ್ಲಿನ ಕಸ ಘಟಕದಲ್ಲಿನ ಕಸದ ರಾಶಿಯನ್ನು ತೆರವುಗೊಳಿಸುವ ಸಂಬಂಧ ಸರ್ಕಾರ ಭರವಸೆ ನೀಡಿದ್ದರೂ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ತಕ್ಷಣವೇ ಸರ್ಕಾರದ ಆದೇಶ ಅನುಷ್ಠಾನವಾಗಬೇಕು. ಇಲ್ಲಿನ ಜನರಿಗೆ ಕಸದಿಂದ ಮುಕ್ತಿ ಕೊಡಿಸಬೇಕು. ಶಶಿಧರ್, ದೊಡ್ಡಬಳ್ಳಾಪುರ ತಾಪಂ ಅಧ್ಯಕ್ಷ